ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ನಗರದ ರಸ್ತೆಯಲ್ಲಿ ಇನ್ನೂ ನೂರಾರು ಗುಂಡಿಗಳಿವೆ : ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು, ಮೇ 7: ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿನ ಕಸ ವಿಲೇವಾರಿಗೆ ಪ್ಯಾಕೇಜ್ ಟೆಂಡರ್ ಮಾಡಿದ್ದು, ಗುತ್ತಿಗೆದಾರರನ್ನು ಕರೆದು ಮಾತುಕತೆ ನಡೆಸಿ ದರ ನಿಗದಿ ಮಾಡಿ ಅವ್ಯವಹಾರ ಮಾಡಲಾಗಿದೆ. ಜಿಬಿಎ ಚುನಾವಣೆಗೆ ಗುತ್ತಿಗೆದಾರರಿಂದಲೇ ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಗುರುವಾರ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ಜೀವನವೆಲ್ಲ ಗುಂಡಿ-ನೀರಿನಲ್ಲೇ ಇರಬೇಕು. ಇದೆಲ್ಲ ಗೊತ್ತಿದ್ದರೂ ಕಸದ ಟೆಂಡರ್ ಅಂಗೀಕರಿಸಲು ಸಂಪುಟದ ಮುಂದೆ ತಂದಿದ್ದಾರೆ. ಒಂದು ವೇಳೆ ಸಂಪುಟ ಅನುಮೋದನೆ ನೀಡಿದರೆ ಚುನಾವಣೆಗೆ ಆಗುವಷ್ಟು ಹಣ ಬಂದಿದೆ ಎಂದಿದೆ ಅರ್ಥ ಎಂದು ಟೀಕಿಸಿದರು.
ಜಿಬಿಎ ಚುನಾವಣೆ ಹೇಗೆ: ಜಿಬಿಎ ಚುನಾವಣೆಗೆ ಹಣವಿಲ್ಲ ಎಂದು ಸರಕಾರ ಹೇಳುತ್ತಿದೆ. ಚುನಾವಣೆಗೂ ಹಣವಿಲ್ಲದವರು ಸರಕಾರ ಹೇಗೆ ನಡೆಸುತ್ತಾರೆ. ಆದರೆ, ರಸ್ತೆ ಗುಂಡಿ ಮುಚ್ಚಲು ಮಾತ್ರ ಸಾವಿರಾರು ಕೋಟಿ ರೂ. ಖರ್ಚು ಮಾಡುವುದು ಹೇಗೆ? ಎಂದು ಪ್ರಶ್ನಿಸಿದ ಅವರು, 2025-26ರಲ್ಲಿ ಡಾಂಬರೀಕರಣ, ರಸ್ತೆ ಗುಂಡಿ ಮುಚ್ಚಲು 1,040 ಕೋಟಿ ರೂ.ಖರ್ಚು ಮಾಡಿದ್ದಾರೆ ಎಂದು ಅವರು ದೂರಿದರು.
ದೊಡ್ಡ ಮೊತ್ತದ ಹಣ ಖರ್ಚು ಮಾಡಿದರೂ ನಗರದ ರಸ್ತೆಯಲ್ಲಿ ಇನ್ನೂ ನೂರಾರು ಗುಂಡಿಗಳಿವೆ. ಹಾಗಾದರೆ ಇವರು ಮುಚ್ಚಿದ ಗುಂಡಿಗಳು ಯಾವುವು. ಚಾಮರಾಜಪೇಟೆಯಲ್ಲಿ ಒಂದು ಗುಂಡಿ ಮುಚ್ಚಲು ಒಂದು ಲಕ್ಷ ರೂ.ವ್ಯಯಿಸಿದ್ದಾರೆ. ಇದರಲ್ಲೂ ಸರಕಾರ ಲೂಟಿ ಮಾಡಿದೆ. ಗುಂಡಿಯಿಂದ ಜನ ಸತ್ತೇ ಇಲ್ಲ. ಆದರೆ, ಒಂದೇ ವರ್ಷದಲ್ಲಿ 851 ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಇದ್ದ ಕಾಂಗ್ರೆಸ್, ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಹೆಚ್ಚಿನ ಸ್ಥಾನ ಪಡೆದ ಕೂಡಲೇ ರಾತ್ರೋರಾತ್ರಿ ಆ ಪಕ್ಷದ ಮುಂದೆ ಹೋಗಿ ಸಚಿವ ಸ್ಥಾನಕ್ಕೆ ಭಿಕ್ಷೆ ಬೇಡುತ್ತಿದೆ. ಡಿಎಂಕೆ ಸಖ್ಯ ಬಿಟ್ಟು ಕಾಂಗ್ರೆಸ್ ಸ್ಥಿತಿ ಭಿಕ್ಷುಕರ ರೀತಿ ಆಗಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದರು.