×
Ad

ಮೇ 16 ರಂದು ಬೆಂಗಳೂರಿನಲ್ಲಿ ಕರ್ನಾಟಕ ಮುಸ್ಲಿಮ್ ಸಮಾವೇಶ

ʼಕಾಂಗ್ರೆಸ್ ಸರಕಾರ ಹೇಳಿದ್ದೇನು ? ಮಾಡಿದ್ದೇನು? ಮುಂದೇನು?ʼ ವರದಿ ಬಿಡುಗಡೆ

Update: 2026-05-13 14:17 IST

ಬೆಂಗಳೂರು: ರಾಜ್ಯದ ಮುಸ್ಲಿಮ್ ಸಮುದಾಯದ ಕಲ್ಯಾಣಕ್ಕಾಗಿ ರಾಜ್ಯ ಸರಕಾರದ ಗಮನ ಸೆಳೆಯುವ ಉದ್ದೇಶದಿಂದ ಮೇ 16ರಂದು ಬೆಂಗಳೂರಿನ ಪುರಭವನ ಸಭಾಂಗಣದಲ್ಲಿ 'ಕರ್ನಾಟಕ ಮುಸ್ಲಿಮ್ ಸಮಾವೇಶ' ಏರ್ಪಡಿಸಲಾಗಿದ್ದು, ಅಂದೇ ಕಾಂಗ್ರೆಸ್ ಸರಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು? ಎಂಬ ವರದಿ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಬುಧವಾರ ನಗರದ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಸಮಾವೇಶದ ಸಂಚಾಲಕರಲ್ಲಿ ಒಬ್ಬರಾದ ಸುಹೇಲ್ ಅಹ್ಮದ್ ಮರೂರ್ ಅವರು, ಕಾಂಗ್ರೆಸ್ ಸರಕಾರದ ಮೂರು ವರ್ಷಗಳ ಕಾರ್ಯವೈಖರಿ ಮಾತ್ರವಲ್ಲದೆ ಅತ್ಯಂತ ಪ್ರಮುಖ ಹತ್ತು ವಿಷಯಗಳಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದ್ದ ಭರವಸೆಗಳು, ಅದರಲ್ಲಿ ಈಡೇರಿದ್ದೆಷ್ಟು, ಈಡೇರದೇ ಇರುವ ಭರವಸೆಗಳು ಎಷ್ಟು ಎಂಬ ಪ್ರಶ್ನೆ ಸಮುದಾಯದಲ್ಲಿದೆ. ಕಾಂಗ್ರೆಸ್ ಸರಕಾರದಲ್ಲಿ ಪ್ರಾತಿನಿಧ್ಯದ ವಿಷಯದಲ್ಲಿ ಮುಸ್ಲಿಮರು ಎದುರಿಸಿದ ತಾರತಮ್ಯ ಹಾಗು ಈಗ ಸರಕಾರಕ್ಕೆ ನಮ್ಮ ಬೇಡಿಕೆಗಳ ಕುರಿತು ದನಿಗೂಡಿಸಲು ಮೇ.16ರಂದು ಸಮಾವೇಶ ಏರ್ಪಡಿಸಲಾಗಿದ್ದು, ಅಂದು ರಾಜ್ಯದ ವಿವಿಧೆಡೆಗಳ ಸಾಮುದಾಯಿಕ ಸಂಘಟನೆಗಳ ನಾಯಕರು, ಹಿರಿಯ ಉಲೇಮಾಗಳು, ಜಮಾಅತ್ ಗಳ ಮುಖಂಡರು, ವಕೀಲರು, ನಿವೃತ್ತ ಅಧಿಕಾರಿಗಳು, ಪತ್ರಕರ್ತರು, ಹೋರಾಟಗಾರರು ಗಳು ಭಾಗಲಿದ್ದಾರೆ ಎಂದರು.

ಪ್ರಮುಖವಾಗಿ ಹಿಜಾಬ್ ನಿರ್ಬಂಧ, ಮೀಸಲಾತಿ ರದ್ದತಿ, ದ್ವೇಷ ಭಾಷಣ - ದ್ವೇಷ ಅಪರಾಧ, ಬಜೆಟ್ ಹಂಚಿಕೆ, ರಾಜಕೀಯ ಪ್ರಾತಿನಿಧ್ಯ, ವಕ್ಫ್ ವಿಷಯ, ಗೋ ಹತ್ಯೆ ನಿಷೇಧ ಕಾಯ್ದೆ, ಮತಾಂತರ ನಿರ್ಬಂಧ ಕಾಯ್ದೆ, ವಿದ್ಯಾರ್ಥಿ ವೇತನ - ಶಿಕ್ಷಣ ಕ್ಷೇತ್ರದ ಅನುದಾನ ಸಹಿತ ವಿವಿಧ ವಿಷಯಗಳ ಕುರಿತ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.

ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ಮೌಲಾನ ಶಬ್ಬೀರ್ ಅಹ್ಮದ್ ಹುಸೇನ್ ನದ್ವಿ ಮಾತನಾಡಿ, ಸಮಾವೇಶಕ್ಕೆ ಯಾವುದೇ ರಾಜಕಾರಣಿಗಳಿಗೆ ಆಹ್ವಾನ ಇರುವುದಿಲ್ಲ. ಜತೆಗೆ ಈ ಸಮಾವೇಶದ ಮೂಲಕ ಯಾರ ಜೊತೆಗೂ ಸಂಘರ್ಷದ ಉದ್ದೇಶ ಇಟ್ಟುಕೊಂಡಿಲ್ಲ. ಆದರೆ, ಮುಸ್ಲಿಮ್ ಸಮುದಾಯದ ಏಳಿಗೆಗೆ ರಾಜ್ಯ ಕಾಂಗ್ರೆಸ್ ಸರಕಾರ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಕೇಳಬೇಕಾಗಿದೆ ಎಂದು ಹೇಳಿದರು.

ಬೆಂಗಳೂರಿನ ಬಿಲಾಲ್ ಮಸೀದಿಯ ಮೌಲಾನಾ ಖಾರಿ ಝುಲ್ಫಿಖರ್ ರಝಾ ನೂರಿ ಮಾತನಾಡಿ, ನಾವು ಯಾರನ್ನು ಟೀಕಿಸಿಸುವ ಹಾಗೂ ಗುರಿ ಮಾಡುವ ಸಲುವಾಗಿ ಈ ಸಮಾವೇಶ ನಡೆಸುತ್ತಿಲ್ಲ.ಆದರೆ, ರಾಜ್ಯದಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಆದರೆ, ಆ ಸಮುದಾಯಕ್ಕೆ ಸೂಕ್ತ ನ್ಯಾಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದನ್ನು ಪ್ರಶ್ನೆ ಮಾಡಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸಂಚಾಲಕರಾದ ತನ್ವೀರ್ ಅಹ್ಮದ್, ಯಹ್ಯಾ ದಾಮೂದಿ ಸೇರಿದಂತೆ ಉಲೇಮಾಗಳು,ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News