×
Ad

Bengaluru | ಎಟಿಎಂ ಹಣ ದರೋಡೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದು ಹೇಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ

►6 ರಾಜ್ಯಗಳಲ್ಲಿ 200 ಪೊಲೀಸರಿಂದ ಕಾರ್ಯಾಚರಣೆ ►ಕಾನ್‍ಸ್ಟೇಬಲ್ ಸಹಿತ ಆರು ಮಂದಿಯ ಬಂಧನ

Update: 2025-11-22 15:59 IST

ಬೆಂಗಳೂರು: ಎಟಿಎಂ ಯಂತ್ರಗಳಿಗೆ ತುಂಬಿಸಲು ಕೊಂಡೊಯ್ಯುತ್ತಿದ್ದ 7.11 ಕೋಟಿ ರೂ. ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದ ಪೊಲೀಸ್ ಕಾನ್‍ಸ್ಟೇಬಲ್ ಸಹಿತ ಆರು ಆರೋಪಿಗಳನ್ನು ಬಂಧಿಸಿದ್ದು, ಈವರೆಗೆ ಬರೋಬ್ಬರಿ 6.45 ಕೋಟಿ ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದಲ್ಲಿ ಶುಕ್ರವಾರ(ನ.21) ರಾತ್ರಿ ಸಿಎಂಎಸ್ ಏಜೆನ್ಸಿಯ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುವರನ್ನು ಬಂಧಿಸಲಾಗಿದ್ದು, ಶನಿವಾರ(ನ.22) ಹೈದರಾಬಾದ್‍ನ ಲಾಡ್ಜ್ ವೊಂದರಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಜೊತೆಗೆ ಇನ್ನುಳಿದ ಇಬ್ಬರು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.

ಈ ಪ್ರಕರಣ ಸಂಬಂಧ ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಈ ಪ್ರಕರಣ ವರದಿಯಾದ ಕೇವಲ 54 ಗಂಟೆಗಳೊಳಗೆ ಮೂವರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಲಾಗಿದ್ದ ಒಂದು ಕಾರನ್ನು ವಶಕ್ಕೆ ಪಡೆಯಾಗಿತ್ತು. 60 ಗಂಟೆಗಳೊಳಗೆ 5.76 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿತ್ತು. ಅನಂತರ ಶನಿವಾರ(ನ.22) ಹೈದರಾಬಾದ್‍ನ ಲಾಡ್ಜ್ ನಲ್ಲಿ ತಂಗಿದ್ದ ಮತ್ತೆ ಮೂವರನ್ನು ಬಂಧಿಸಿ ಬೆಂಗಳೂರಿಗೆ ಕರೆತರಲಾಗುತ್ತಿದೆ. ಇನ್ನುಳಿದ ಇಬ್ಬರು ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ. ಈವರೆಗೆ 30ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದರು.

ಮೂರು ತಿಂಗಳಿಂದ ಸಂಚು:

ಹಿಂದಿನ ಮೂರು ತಿಂಗಳುಗಳಿಂದ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಕೃತ್ಯಕ್ಕೆ 15 ದಿನಗಳಿಂದಲೂ ಸ್ಥಳವನ್ನು ನಿಗದಿ ಮಾಡಿದ್ದರು. ನವೆಂಬರ್ 19ರಂದು 12:48ರ ಸುಮಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್-ಜಯನಗರ-ಡೇರಿ ಸರ್ಕಲ್ ಮಾರ್ಗದಲ್ಲಿ ಬಂದು, ಕಸ್ಟೋಡಿಯನ್ ವಾಹನವನ್ನು ಅಡ್ಡಗಟ್ಟಿ ತಾವು ಆರ್‍ಬಿಐ ನಿಯಂತ್ರಣಾಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು. ನಂತರ ಮತ್ತೋರ್ವ ಆರೋಪಿ ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್‍ನತ್ತ ಚಲಾಯಿಸುವಂತೆ ಸೂಚಿಸಿದ್ದ ಎಂದು ವಿವರಿಸಿದರು.

ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು:

ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು ಮೊಬೈಲ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಆಸ್ಪತ್ರೆಯ ಬಳಿ ಕೆಳಗಿಳಿಸಿ ಪರಾರಿಯಾಗಿದ್ದರು. ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ಗಂಟೆ ಕಳೆದುಹೋಗಿತ್ತು. ನಂತರ ನಾವು ತನಿಖೆ ಕೈಗೊಂಡಾಗ ಆರೋಪಿಗಳು ಸಿಸಿಟಿವಿಗಳು ಇರದ ಸ್ಥಳಗಳನ್ನು ಬಳಸಿಕೊಂಡಿರುವುದು, ಮೊಬೈಲ್‍ಗಳನ್ನು ಬಳಕೆ ಮಾಡದಿರುವುದು ಹಾಗೂ ದರೋಡೆಯಾದ ಹಣದ ನೋಟುಗಳು ಸಹ ಸರಣಿ ನಂಬರ್ ನಲ್ಲಿ ಇರದಿರುವುದು ತನಿಖೆಗೆ ಸಾಕಷ್ಟು ಸವಾಲಿನ ಸಂಗತಿಯಾಗಿತ್ತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.

ಸಿಎಂಎಸ್ ಏಜೆನ್ಸಿಯಿಂದಲೂ ಲೋಪ:

ಹಣ ಸಾಗಿಸುವ ಸಿಎಂಎಸ್ ಏಜೆನ್ಸಿಯ ವಾಹನದಲ್ಲಿ ಚಾಲಕನನ್ನು ಹೊರತುಪಡಿಸಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಇರಬೇಕು. ಕಸ್ಟೋಡಿಯನ್ ವಾಹನ ಒಂದೇ ಸಮಯ, ಒಂದೇ ಮಾರ್ಗವನ್ನು ಪದೇ ಪದೆ ಬಳಸಬಾರದು. ಸಿಬ್ಬಂದಿಯು ಹಣ ನಿರ್ವಹಣೆಯ ಕುರಿತು ತರಬೇತಿ ಪಡೆದಿರಬೇಕು, ಸಿಬ್ಬಂದಿಯ ಹಿನ್ನೆಲೆಯ ಕುರಿತು ಪರಿಶೀಲನೆ ಆಗಿರಬೇಕು. ಹಾಗೂ ಕಸ್ಟೋಡಿಯನ್ ಕಂಪೆನಿಯ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಪೊಲೀಸರಿಗೆ ಮಾಹಿತಿ ನೀಡಿರಬೇಕು ಎಂಬುದು ಆರ್ ಬಿಐ ನಿಯಮಗಳಲ್ಲಿದೆ. ಆದರೆ, ಇಲ್ಲಿ ಸಿಎಂಎಸ್ ಸೆಕ್ಯುರಿಟೀಸ್ ಕಂಪೆನಿಯವರಿಂದ ಕೆಲ ಲೋಪದೋಷಗಳಾಗಿರುವುದು ಕಂಡು ಬಂದಿದೆ. ಆರ್‍ಬಿಐಗೆ ಪತ್ರ ಬರೆಯಲಾಗುವುದು ಎಂದು ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.

6 ರಾಜ್ಯಗಳಲ್ಲಿ 200 ಪೊಲೀಸರಿಂದ ಕಾರ್ಯಾಚರಣೆ:

ಈ ದರೋಡೆಯ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ, ಬೆಂಗಳೂರಿನ ಗಡಿಭಾಗದ ಜಿಲ್ಲೆಗಳ ಎಸ್ಪಿಗಳು, ನೆರೆಯ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಜೊತೆಗೆ, ಬೆಂಗಳೂರು ಪೊಲೀಸ್ ಇಲಾಖೆಯ ಇಬ್ಬರು ಜಂಟಿ ಆಯುಕ್ತರ ಮಾರ್ಗದರ್ಶನದಲ್ಲಿ ಇಬ್ಬರು ಡಿಸಿಪಿಗಳ ನೇತೃತ್ವದ 200 ಜನ ಅಧಿಕಾರಿ ಹಾಗೂ ಸಿಬ್ಬಂದಿಯನ್ನೊಳಗೊಂಡ 11 ತಂಡಗಳು ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಗೋವಾ, ತೆಲಂಗಾಣ ರಾಜ್ಯಗಳಿಗೆ ತೆರಳಿ ನಿರಂತರ ಕಾರ್ಯಾಚರಣೆಯನ್ನು ನಡೆಸಿವೆ. ತನಿಖೆಗೆ ಆಯಾ ರಾಜ್ಯಗಳ ಸ್ಥಳೀಯ ಪೊಲೀಸರ ಸಹಕಾರ ಸಿಕ್ಕಿದೆ. ದೊರಕಿದೆ ಎಂದು ಸೀಮಂತ್‍ಕುಮಾರ್ ಸಿಂಗ್ ಹೇಳಿದರು.

ತನಿಖಾ ತಂಡಕ್ಕೆ 5 ಲಕ್ಷ ರೂ. ನಗದು ಬಹುಮಾನ:

‘ನಿರಂತರವಾಗಿ ಕಾರ್ಯಾಚರಣೆ ಕೈಗೊಂಡು ಈ ದರೋಡೆ ಪ್ರಕರಣವನ್ನು ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ. ಹೀಗಾಗಿ ತನಿಖಾ ತಂಡದಲ್ಲಿದ್ದ ಎಲ್ಲ ಅಧಿಕಾರಿಗಳಿಗೆ 5 ಲಕ್ಷ ನಗದು ಬಹುಮಾನ ಘೋಷಿಸುತ್ತಿದ್ದೇನೆ’ ಎಂದು ಬೆಂಗಳೂರು ಪೆÇಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದರು.

ಕಾನ್‍ಸ್ಟೇಬಲ್ ಸಹಿತ ಮೂವರು 10 ದಿನ ಪೊಲೀಸ್ ವಶಕ್ಕೆ:

ಶುಕ್ರವಾರ(ನ.21) ರಾತ್ರಿ ಬಂಧಿತರಾಗಿದ್ದ ಸಿಎಂಎಸ್ ಏಜೆನ್ಸಿಯ ವಾಹನದ ಮೇಲ್ವಿಚಾರಕ ರವಿ, ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಗೋವಿಂದಪುರ ಠಾಣೆಯ ಕಾನ್‍ಸ್ಟೇಬಲ್ ಅಣ್ಣಪ್ಪ ನಾಯ್ಕ್ ಎಂಬುವರನ್ನು ಸಿದ್ದಾಪುರ ಠಾಣೆಯ ಪೊಲೀಸರು ಶನಿವಾರ(ನ.22) ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇನ್ನು ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು, ಮೂವರು ಆರೋಪಿಗಳನ್ನು 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News