ಬೆಂಗಳೂರು | ಕೋಗಿಲು ಬಡಾವಣೆಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳಿಂದ ಸರ್ವೆ ಕಾರ್ಯ ಆರಂಭ
ಬೆಂಗಳೂರು, ಡಿ.28: ಕೋಗಿಲು ಬಡಾವಣೆಯಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ಜಿಬಿಎ ತೆರವುಗೊಳಿಸಿದ ಜಾಗದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ಅಧಿಕಾರಿಗಳು ಸರ್ವೆ ಕಾರ್ಯ ಆರಂಭಿಸಿದ್ದಾರೆ.
ಸುಮಾರು 180 ಮನೆಗಳ ಸರ್ವೆ ಕಾರ್ಯ ಆರಂಭಿಸಿರುವ ಅಧಿಕಾರಿಗಳು ಸ್ಥಳೀಯರಿಂದ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ಸಂಜೆ 5 ಗಂಟೆಗೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೇರಿ ಯಲ್ಲಿ ಮಹತ್ವದ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಸರ್ವೆ ಕಾರ್ಯ ನಡೆಸಿ ಸ್ಥಳೀಯ ಪರಿಸ್ಥಿತಿ ಕುರಿತು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ.
ಸ್ಥಳಕ್ಕೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಭೇಟಿ :
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ ಭಟ್ ಸ್ಥಳಕ್ಕೆ ಭೇಟಿ ಮಾಡಿ ಸ್ಥಳೀಯರ ಅಹವಾಲುಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಕುರಿತು ಮಾನವ ಹಕ್ಕುಗಳ ಆಯೋಗದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಮನೆಗಳನ್ನು ತೆರವು ಮಾಡಿರುವ ಕುರಿತು ಜಿಬಿಎ ಬಳಿ ವರದಿ ಕೇಳಿದ್ದೇವೆ. ನಮ್ಮ ಆಯೋಗದಲ್ಲಿ ಇರುವ ಪೊಲೀಸ್ ಘಟಕದ ಎಡಿಜಿಪಿ ನೇತೃತ್ವದಲ್ಲಿ ತನಿಖೆ ಮಾಡುತ್ತೇವೆ ಎಂದು ಹೇಳಿದರು.
ಸ್ಥಳೀಯರಿಂದ ದಾಖಲಾತಿ ಪಡೆಯುತ್ತೇವೆ. ಅವುಗಳ ಪರಿಶೀಲನೆ ಹಾಗೂ ತನಿಖೆ ಆನಂತರ ನಾವು ಸರಕಾರಕ್ಕೆ ಶಿಫಾರಸುಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.
ಮನೆಗಳನ್ನು ತೆರವು ಮಾಡಿದ ನಂತರ ಸ್ಥಳೀಯರಿಗೆ ಪರ್ಯಾಯ ವ್ಯವಸ್ಥೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಾಳಜಿ ಕೇಂದ್ರಗಳು ತುಂಬಾ ದೂರದ ಪ್ರದೇಶದಲ್ಲಿ ಇದೆ ಎಂದು ಸ್ಥಳೀಯರು ತಿಳಿಸುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಪೊಲೀಸರು ತನಿಖೆಗೆ ಬಂದಾಗ ನಿಮ್ಮ ಬಳಿ ಇರುವ ದಾಖಲೆಗಳನ್ನು ಅವರಿಗೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಶ್ಯಾಮ್ ಭಟ್ ಹೇಳಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಮಧ್ಯಾಹ್ನ 3.00 ಗಂಟೆಗೆ ಯಲಹಂಕದ ಕೋಗಿಲು ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸರಕಾರಿ ಜಾಗದಲ್ಲಿ ಅನಧಿಕೃತ ನಿರ್ಮಾಣಗಳ ತೆರವು ಜಾಗಕ್ಕೆ ಭೇಟಿ ನೀಡಲಿದ್ದಾರೆ.