×
Ad

ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ: ಪೋಷಕರ ಆಕ್ರೋಶ

Update: 2023-12-22 15:00 IST

ಬೆಂಗಳೂರು, ಡಿ.22: ಶಾಲಾ ವಿದ್ಯಾರ್ಥಿಗಳ ಕೈಯಲ್ಲಿ ಶಿಕ್ಷಕರು ಶೌಚಾಲಯ ಸ್ವಚ್ಛತೆ ಮಾಡಿಸಿದ ಘಟನೆ ಬೆಂಗಳೂರಿನ ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರಕಾರಿ ಶಾಲೆಯಲ್ಲಿ ನಡೆದಿರುವುದು ವರದಿಯಾಗಿದೆ. ಇದು ಬೆಳಕಿಗೆ ಬರುತ್ತಿದ್ದಂತೆ ಶಾಲೆಯ ಶಿಕ್ಷಕರ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.

ಅಂದ್ರಹಳ್ಳಿಯಲ್ಲಿರುವ ಸರಕಾರಿ ಶಾಲೆಯಲ್ಲಿ ಮಕ್ಕಳಿಂದಲೇ ಶೌಚಾಲಯ ಕ್ಲೀನ್ ಮಾಡಿಸಲಾಗಿದೆ. ಒಬ್ಬ ವಿದ್ಯಾರ್ಥಿ ಕ್ಲೀನಿಂಗ್ ದ್ರಾವಣ ಸುರಿಯುತ್ತಿದ್ದರೆ, ಮತ್ತೊಬ್ಬ ಪೊರಕೆ ಹಿಡಿದು ಗುಡಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ.

ಈ ಘಟನೆಗೆ ಸಂಬಂಧಿಸಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಮುಖ್ಯ ಶಿಕ್ಷಕಿಯ ಅಮಾನತು

ಬೆಂಗಳೂರಿನ ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛತೆ ಮಾಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀ ದೇವಮ್ಮರನ್ನು ಅಮಾನತು ಮಾಡಲಾಗಿದೆ.

ಪೀಣ್ಯದ ಅಂದ್ರಹಳ್ಳಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿದ್ದ ಪ್ರಕರಣ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಬೆಂಗಳೂರು ಉತ್ತರ ಬಿಇಒ ಕೆ.ಜಿ.ಅಂಜನಪ್ಪ ಅವರು ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News