Bengaluru | ಸಿನಿಮಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಅಪ್ರಾಪ್ತನ ಬಂಧನ
ಸಾಂದರ್ಭಿಕ ಚಿತ್ರ | PC : Gemini AI
ಬೆಂಗಳೂರು : ಸಿನಿಮಾ ಥಿಯೇಟರ್‌ನ ಮಹಿಳಾ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜನವರಿ 4ರಂದು ರಾತ್ರಿ 9:30ಕ್ಕೆ ಮಡಿವಾಳದ ಥಿಯೇಟರ್‌ವೊಂದರಲ್ಲಿ ಘಟನೆ ನಡೆದಿದೆ. ಸಿನಿಮಾ ನೋಡಲು ಬಂದಿದ್ದ ಕೆಲ ಸ್ನೇಹಿತೆಯರು ಶೌಚಾಲಯ ಬಳಸಲು ತೆರಳಿದ್ದರು. ಇದೇ ವೇಳೆ ಆರೋಪಿ ಮೊಬೈಲ್ ಮೂಲಕ ಚಿತ್ರೀಕರಣ ಮಾಡುತ್ತಿರುವುದನ್ನು ಗಮನಿಸಿದ್ದಾರೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಕೂಡಲೇ ಆರೋಪಿಯನ್ನು ಹಿಡಿದು ಥಳಿಸಿ ಮಡಿವಾಳ ಠಾಣಾ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಥಿಯೇಟರ್ ನಲ್ಲೇ ಕೆಲಸ ಮಾಡುತ್ತಿದ್ದ ಆರೋಪಿ: ಕೆಲ ದಿನಗಳಿಂದಲೂ ಆರೋಪಿ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿದ್ದು, ಕಮಲ್ ಎಂಬಾತ ವಿಡಿಯೋ ಚಿತ್ರೀಕರಿಸಲು ಸೂಚಿಸಿರುವುದಾಗಿ ಪೊಲೀಸರ ಮುಂದೆ ಅಪ್ರಾಪ್ತ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿ ಬಾಲಕ, ಕಮಲ್ ಹಾಗೂ ಥಿಯೇಟರ್ ಸಿಬ್ಬಂದಿ ವಿರುದ್ಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಆರೋಪಿಯ ಮೊಬೈಲ್‍ನಲ್ಲಿ ಕೆಲ ವಿಡಿಯೋಗಳು ಪತ್ತೆಯಾಗಿದ್ದು, ಹಲವು ದಿನಗಳಿಂದ ಕೃತ್ಯ ಎಸಗುತ್ತಿದ್ದ ಬಗ್ಗೆ ಶಂಕೆಯಿದೆ. ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.