×
Ad

ಬೆಂಗಳೂರು: ಅನೈತಿಕ ಸಂಬಂಧ ನಿರಾಕರಿಸಿದ ಕಾರಣಕ್ಕೆ ಮಹಿಳೆಯ ಕೊಲೆ

Update: 2023-12-11 19:14 IST

ಬೆಂಗಳೂರು: ಅನೈತಿಕ ಸಂಬಂಧ ನಿರಾಕರಿಸಿದ ಕಾರಣಕ್ಕೆ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಇಲ್ಲಿನ ಜೆ.ಜೆ ನಗರದ ನಾಲ್ಕನೇ ಕ್ರಾಸ್‍ನಲ್ಲಿ ವರದಿಯಾಗಿದೆ.

ಪರ್ವೀನ್ ತಾಜ್ ಕೊಲೆಯಾದ ಮಹಿಳೆಯಾಗಿದ್ದು, ಕೃತ್ಯದ ಬಳಿಕ ಆರೋಪಿ ಮುಹಮ್ಮದ್ ಜುನೈದ್ ಪರಾರಿಯಾಗಿದ್ದಾನೆ.

ಆರೋಪಿ ಮುಹಮ್ಮದ್ ಜುನೈದ್ ತನ್ನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಹೊಂದಿದ್ದ. ಈ ವಿಚಾರವಾಗಿ ದಂಪತಿ ಕಿತ್ತಾಡಿಕೊಂಡಿದ್ದರು. ಅವರಿಬ್ಬರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಈ ಘಟನೆ ಆದ ಬಳಿಕ ಪತ್ನಿಯಿಂದ ದೂರವಾಗಿದ್ದ ಜುನೈದ್, ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ.

ಇದೇ ಸಂದರ್ಭದಲ್ಲಿ ಜುನೈದ್ ತನ್ನ ಸಂಬಂಧಿ ಪರ್ವಿನ್ ತಾಜ್‍ಗೆ ಹತ್ತಿರವಾಗಿದ್ದ. ಇತ್ತ ಪರ್ವೀನ್ ಸಹ ವಿವಾಹವಾಗಿದ್ದರೂ ಸಹ ಜುನೈದ್‍ನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಇತ್ತೀಚೆಗೆ ಪರ್ವೀನ್ ಸಹ ಜುನೈದ್‍ನನ್ನು ನಿರ್ಲಕ್ಷ್ಯಿಸತೊಡಗಿದ್ದಳು. ಇದೇ ವಿಚಾರಕ್ಕೆ ಕೋಪಗೊಂಡಿದ್ದ ಜುನೈದ್ ಡಿ.10ರಂದು ಯಾರೂ ಇರದ ಸಮಯದಲ್ಲಿ ಪರ್ವೀನ್ ಮನೆಗೆ ಚಾಕು ಸಮೇತ ತೆರಳಿ ಇರಿದು ಕೊಲೆಗೈದಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಬಳಿಕ ಆರೋಪಿ ಜುನೈದ್ ಪರಾರಿಯಾಗಿದ್ದು, ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸ್ಥಳೀಯರನ್ನು ವಿಚಾರಿಸಿದಾಗ ಮೇಲಿನ ವಿವರ ಪೊಲೀಸರಿಗೆ ದೊರೆತಿದೆ. ಬಳಿಕ ಕೊಲೆಯಾದ ಮಹಿಳೆಯ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಜೆ.ಜೆ. ನಗರ ಠಾಣಾ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News