ಧ್ರುವ ರಾಠಿ ವೀಸಾ ಪರಿಶೀಲನೆಗೆ ಭಾಸ್ಕರ್ ರಾವ್ ಒತ್ತಾಯ
ಭಾಸ್ಕರ್ ರಾವ್, ಧ್ರುವ ರಾಠಿ
ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಯೂಟ್ಯೂಬರ್ ಧ್ರುವ ರಾಠಿ ಭಾಗವಹಿಸಿದ ಹಿನ್ನೆಲೆಯಲ್ಲಿ, ಅವರ ಪೌರತ್ವ, ವಲಸೆ ಸ್ಥಿತಿ ಹಾಗೂ ವೀಸಾ ನಿಯಮಗಳ ಪಾಲನೆಯ ಬಗ್ಗೆ ಪರಿಶೀಲನೆ ನಡೆಸುವಂತೆ ಬಿಜೆಪಿ ನಾಯಕ, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಕೇಂದ್ರ ಗೃಹ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿರುವ ಭಾಸ್ಕರ್ ರಾವ್, ಧ್ರುವ ರಾಠಿ ಜರ್ಮನ್ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ಗುರುವಾರ ಬೆಂಗಳೂರಿನಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಸೇರಿದಂತೆ ಇತರರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಭಾರತೀಯ ಚುನಾವಣಾ ಆಯೋಗದ ಪ್ರಕ್ರಿಯೆಯನ್ನು ಟೀಕಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿದೇಶಿ ಪ್ರಜೆಯೊಬ್ಬರು ನಿರ್ದಿಷ್ಟ ವೀಸಾ ಅಥವಾ ವಲಸೆ ಅನುಮತಿಯ ಆಧಾರದಲ್ಲಿ ಭಾರತದಲ್ಲಿರುವಾಗ, ದೇಶದ ಸಾಂವಿಧಾನಿಕ ಮತ್ತು ಕಾನೂನುಬದ್ಧ ಸಂಸ್ಥೆಗಳ ಕಾರ್ಯವೈಖರಿಗೆ ಸಂಬಂಧಿಸಿದ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಲು ಅಥವಾ ಭಾಷಣ ಮಾಡಲು ಕಾನೂನಿನ ಪ್ರಕಾರ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಭಾಸ್ಕರ್ ರಾವ್ ಪತ್ರದಲ್ಲಿ ತಿಳಿಸಿದ್ದಾರೆ.