ಬಿ.ಕೆ.ಹರಿಪ್ರಸಾದ್

ಬೆಂಗಳೂರು : ದಿಲ್ಲಿಯ ರಸ್ತೆಗಳನ್ನು ಮುಚ್ಚಬಹುದು ಪ್ರಧಾನಿಗಳೇ, ಜನರ ಪ್ರಶ್ನೆಗಳಿಗೆ ಬೀಗ ಹಾಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕುವ ಪ್ರತಿಯೊಂದು ಪ್ರಯತ್ನವೂ ದಿಲ್ಲಿಯ ಅಧಿಕಾರದ ಗದ್ದುಗೆಯನ್ನೇ ಅಲುಗಾಡಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ದಿಲ್ಲಿಯಲ್ಲಿ ನಾಳೆ ನಡೆಯುವ ಪ್ರತಿಭಟನೆಗೆ ಕೇಂದ್ರ ಸರಕಾರದ ಧೋರಣೆ ನೋಡಿದರೆ, ಎಸ್‍ಐಆರ್ ರದ್ದಾಗುವುದು ಮತ್ತು ಜ್ಞಾನೇಶ್ ಕುಮಾರ್ ಬಂಧನವಾಗುವುದು ಖಚಿತವಾದಂತಿದೆ ಎಂದು ಹೇಳಿದ್ದಾರೆ.

ಈ ಹಿಂದೆ ರೈತರ ಪ್ರತಿಭಟನೆಯ ವೇಳೆಯೂ ಇದೇ ರೀತಿ ದಿಲ್ಲಿ ಪ್ರವೇಶ ನಿರ್ಬಂಧಿಸುವ ಕೃತ್ಯವನ್ನು ಕೇಂದ್ರ ಸರಕಾರ ಮಾಡಿತ್ತು. ಆ ಬಳಿಕ ಕೇಂದ್ರ ಸರಕಾರ ಪ್ರತಿಭಟನಾ ನಿರತ ರೈತರ ಎದುರು ಮಂಡಿಯೂರಿ ಕಾಯ್ದೆಗಳನ್ನು ಹಿಂಪಡೆದಿತ್ತು. ಈಗ ಇತಿಹಾಸ ಮತ್ತೆ ಮರುಕಳಿಸುವ ದಿನ ಬಂದಿದೆ ಎಂದು ಹರಿಪ್ರಸಾದ್ ತಿಳಿಸಿದ್ದಾರೆ.

ವಿದ್ಯಾರ್ಥಿ-ಯುವಜನ ನಾಯಕರ ಬಂಧನ, ರಾಜಕೀಯ ನಾಯಕರ ಗೃಹಬಂಧನ, ಸಾವಿರಾರು ಪೊಲೀಸರ ನಿಯೋಜನೆ, ದಿಲ್ಲಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧ, ಪ್ರತಿಭಟನೆಗೆ ಬೆಂಬಲ ನೀಡದಂತೆ ಧಾರ್ಮಿಕ ಸಂಸ್ಥೆಗಳ ಮೇಲೆ ಒತ್ತಡ ಹೇರಿರುವುದು ಹಾಗೂ ರೈಲುಗಳು ರಾಜಧಾನಿಯ ಪ್ರವೇಶ ಮಾರ್ಗಗಳಿಗೆ ನಿರ್ಬಂಧಿ ಹೇರುವುದು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಜನರ ಮೇಲೆ ಒತ್ತಡ ಹೇರುತ್ತಿರುವ ಆರೋಪಗಳನ್ನು ದೇಶದ ಜನ ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೂ ರೈತರ ಪ್ರತಿಭಟನೆಯ ಸಂದರ್ಭದಲ್ಲಿಯೂ ದಿಲ್ಲಿಯ ಪ್ರವೇಶ ಮಾರ್ಗಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ರೈತರ ಸುದೀರ್ಘ ಹೋರಾಟದ ಎದುರು ನರೇಂದ್ರ ಮೋದಿ ಸರಕಾರ ಮಂಡಿಯೂರಬೇಕಾಯಿತು, ಬಳಿಕ ಕೇಂದ್ರ ಸರಕಾರ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕಾಯಿತು. ಆ ಐತಿಹಾಸಿಕ ಘಟನೆ ಸರಕಾರಗಳಿಗೆ ಮಹತ್ವದ ಪಾಠವನ್ನು ಕಲಿಸಿರುವಾಗ, ದೇಶದ ನಾಗರಿಕರ ನ್ಯಾಯಯುತ ಪ್ರಶ್ನೆಗಳಿಗೆ ಪೊಲೀಸ್ ನಿರ್ಬಂಧಗಳು ಶಾಶ್ವತ ಉತ್ತರವಲ್ಲ ಎಂದು ಹರಿಪ್ರಸಾದ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‍ಐಆರ್) ಕುರಿತು ವ್ಯಕ್ತವಾಗಿರುವ ಆಕ್ಷೇಪಣೆಗಳು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸರ್ವಾಧಿಕಾರಿ, ಪಕ್ಷಪಾತಿತನ ಹಾಗೂ ದೇಶದ್ರೋಹಿತನದ ವಿರುದ್ಧ ಎದ್ದಿರುವ ಪ್ರಶ್ನೆಗಳಿಗೆ ಪಾರದರ್ಶಕ ಉತ್ತರ ದೊರೆಯಬೇಕು. ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವುದು ಸಾಂವಿಧಾನಿಕ ಹೊಣೆಗಾರಿಕೆ ಎಂದು ಅವರು ಹೇಳಿದ್ದಾರೆ.

ಪ್ರತಿಭಟನೆಗೆ ಅವಕಾಶ ನೀಡುವುದು ಸರಕಾರದ ಔದಾರ್ಯವಲ್ಲ; ಅದು ಸಂವಿಧಾನ ಕಲ್ಪಿಸಿರುವ ನಾಗರಿಕ ಹಕ್ಕು. ಕಾನೂನುಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವನ್ನು ಅನಗತ್ಯ ನಿರ್ಬಂಧಗಳ ಮೂಲಕ ಕುಂಠಿತಗೊಳಿಸುವ ಯಾವುದೇ ಪ್ರಯತ್ನವೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಈ ನಿರ್ಬಂಧಗಳ ಅಗತ್ಯ ಮತ್ತು ಕಾನೂನುಬದ್ಧತೆಯ ಕುರಿತು ದೇಶಕ್ಕೆ ಉತ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ಸರಕಾರವು ಜನರನ್ನು ನಿಯಂತ್ರಿಸುವ ಅಧಿಕಾರ ಹೊಂದಿರುವುದಕ್ಕಿಂತಲೂ, ಜನರಿಗೆ ಉತ್ತರ ನೀಡುವ ಹೊಣೆಗಾರಿಕೆಯನ್ನು ಹೊಂದಿದೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಸಹಚರರು ಅರ್ಥ ಮಾಡಿಕೊಳ್ಳಬೇಕು ಎಂದು ಹರಿಪ್ರಸಾದ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor