ಮೋದಿ ಹೆಸರಿನ ರಾಜಕೀಯ ಸರಕು ಖಾಲಿ, ಇನ್ನು ಗೆಲ್ಲಲು ಸಾಧ್ಯವಿಲ್ಲ: ಸಚಿವ ಮಧು ಬಂಗಾರಪ್ಪ
"ಮೋದಿ ಸುಳ್ಳುಗಳನ್ನು ಯುವಜನರು ನಂಬುತ್ತಿಲ್ಲ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ"
ಬೆಂಗಳೂರು : ದೇಶ ಕಂಡ ಅತ್ಯಂತ ಸುಳ್ಳು ಹೇಳುವ ಪ್ರಧಾನಮಂತ್ರಿ ಯಾರಾದರೂ ಇದ್ದರೆ ಅದು ನರೇಂದ್ರ ಮೋದಿ. ಬಿಜೆಪಿಗೆ ಮೋದಿ ಹೆಸರಿನ ರಾಜಕೀಯ ಸರಕು ಖಾಲಿಯಾಗಿದ್ದು, ಅವರ ಹೆಸರಿನಲ್ಲಿ ಇನ್ನು ಮುಂದೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ಶುಕ್ರವಾರ ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೀಗಾಗಿಯೇ ಎಸ್‍ಐಆರ್ (ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ) ಮೂಲಕ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಪಾಕಿಸ್ತಾನ ಹಾಗೂ ಧರ್ಮಗಳ ನಡುವೆ ಜನರನ್ನು ಎತ್ತಿಕಟ್ಟುವ ಬಿಜೆಪಿಯ ರಾಜಕೀಯ ತಂತ್ರಗಳು ಸವಕಲಾಗಿವೆ. ಮೋದಿ ಮುಖವನ್ನಿಟ್ಟುಕೊಂಡು ಇನ್ನು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ. ಹೀಗಾಗಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುವ ಮೂಲಕ ವಂಚನೆಯ ಹಾದಿ ಹಿಡಿದಿದ್ದಾರೆ ಎಂದು ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮತದಾರರ ಹಕ್ಕುಗಳ ರಕ್ಷಣೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯ :
ದೇಶದಲ್ಲಿ ಕೋಟ್ಯಂತರ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಮಾಧ್ಯಮಗಳು ಈ ವಿಚಾರವನ್ನು ಗಂಭೀರವಾಗಿ ಪ್ರಶ್ನಿಸಬೇಕು. ಪ್ರಜಾಪ್ರಭುತ್ವವನ್ನು ಉಳಿಸುವ ಜವಾಬ್ದಾರಿ ಮಾಧ್ಯಮಗಳ ಮೇಲೂ ಇದೆ. ಸತ್ಯಾಂಶಗಳನ್ನು ಜನರ ಮುಂದಿಡಬೇಕು. ಬಿಜೆಪಿ ನಾಯಕರು ಮುಖ್ಯ ಚುನಾವಣಾ ಆಯುಕ್ತರನ್ನು ತಮ್ಮ ಮನೆಯ ಕೈಗೊಂಬೆಯಂತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.
ಎಸ್‍ಐಆರ್ ವಿಚಾರದಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಮಧು ಬಂಗಾರಪ್ಪ, ಮತದಾನದ ಹಕ್ಕು ಪವಿತ್ರವಾದದ್ದು. ಅದನ್ನು ಕಸಿದುಕೊಳ್ಳುವುದು ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು. ಮತದಾರರ ಹಕ್ಕುಗಳನ್ನು ರಕ್ಷಿಸುವುದೇ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಹೇಳಿದರು.
ರಾಹುಲ್ ಗಾಂಧಿ ಹೋರಾಟಕ್ಕೆ ಜನಬೆಂಬಲ :
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಮಾಧ್ಯಮಗಳನ್ನು ಬಳಸಿಕೊಂಡು ನಿರಂತರ ಅಪಪ್ರಚಾರ ನಡೆಸಲಾಗಿದೆ. ಆದರೂ ಅವರು ಜನರ ನಡುವೆ ಬೆಳೆದು ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮತದಾರರ ಹಕ್ಕುಗಳನ್ನು ರಕ್ಷಿಸಲು ಅವರು ಹೋರಾಟ ನಡೆಸುತ್ತಿದ್ದಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಮಾಧ್ಯಮಗಳ ಬೆಂಬಲದೊಂದಿಗೆ ಮೋದಿ ತಮಗೆ ತೋಚಿದ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದರು. ಇದರಿಂದ ಜನರು ಮತ್ತು ಸರಕಾರದ ನಡುವಿನ ಅಂತರ ಹೆಚ್ಚಾಗಿದೆ. ಅದರಲ್ಲೂ ಜೆನ್ ಝೀ ಯುವಜನತೆ ಮೋದಿ ಅವರನ್ನು ನಂಬುತ್ತಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಯುವಜನರು ಮೋದಿಯನ್ನು ಲೇವಡಿ ಮಾಡುತ್ತಿರುವುದನ್ನು ಕಾಣಬಹುದು. ಯುವಜನರು ಮೋದಿ ಅವರ ಭರವಸೆಗಳನ್ನು ಪ್ರಶ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಯುವಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಹಾಗೂ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ನೀಡುವ ಭರವಸೆಗಳ ವಿಚಾರದಲ್ಲಿ ಮೋದಿ ಅವರ ಬಣ್ಣ ಬಯಲಾಗಿದೆ. ಅವರ ಸುಳ್ಳುಗಳನ್ನು ಯುವಜನರು ನಂಬುತ್ತಿಲ್ಲ. ಇನ್ನು ಮುಂದೆ ದೇಶದಲ್ಲಿ ಮೋದಿ ಅವರ ರಾಜಕೀಯ ನಡೆಯುವುದಿಲ್ಲ ಎಂದು ಮಧು ಬಂಗಾರಪ್ಪ ನುಡಿದರು.
ರಾಷ್ಟ್ರಪತಿಗಳಿಂದ ಏನು ನಿರೀಕ್ಷಿಸಲು ಸಾಧ್ಯ? :
ರಾಷ್ಟ್ರಪತಿಗಳ ನಿಯೋಗವು ಕಾಂಗ್ರೆಸ್ ನಾಯಕತ್ವವನ್ನು ಭೇಟಿಯಾಗಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮೌನ ರಾಷ್ಟ್ರಪತಿಗಳು ಎಂಬುದು ಎಲ್ಲರಿಗೂ ಗೊತ್ತಿದೆ. ಪ್ರಧಾನಿ ಮೋದಿ ಹೇಳಿದಂತೆ ಕೇಳುವ ಪರಿಸ್ಥಿತಿಯಲ್ಲಿ ಅವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮತದಾರರ ಹಕ್ಕುಗಳ ರಕ್ಷಣೆಯ ವಿಚಾರದಲ್ಲಿ ದೇಶಾದ್ಯಂತ ದೊಡ್ಡ ಮಟ್ಟದ ಆಂದೋಲನ ನಡೆಯುವ ಸಾಧ್ಯತೆಯಿದೆ. ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಮೀರಿಸುವಷ್ಟು ಭದ್ರತೆ ಇಟ್ಟುಕೊಳ್ಳಲಿ; ದೇಶದ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಅರ್ಹರಿಗೆ ಗೃಹಲಕ್ಷ್ಮಿ ಹಣ ತಲುಪಲಿದೆ :
ಗ್ಯಾರಂಟಿ ಯೋಜನೆಗಳ ಹಣ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಮೂರು ತಿಂಗಳ ವಿಚಾರವನ್ನಷ್ಟೇ ಪ್ರಸ್ತಾಪಿಸಲಾಗುತ್ತಿದೆ. ಆದರೆ, ಹಿಂದಿನ ಮೂರು ವರ್ಷಗಳಲ್ಲಿ ನೀಡಿರುವ ನೆರವಿನ ಬಗ್ಗೆಯೂ ಮಾತನಾಡಬೇಕು ಎಂದರು.
ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳು ತಲುಪಬೇಕು ಎಂಬ ಉದ್ದೇಶದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಲಿದೆ ಎಂದು ಅವರು ಭರವಸೆ ನೀಡಿದರು.
ವಿರೋಧ ಪಕ್ಷದವರು ಸ್ಟಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಜಾಗರೂಕರಾಗಿರುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಉಳಿದ ವಿಚಾರಗಳನ್ನು ಮುಖ್ಯಮಂತ್ರಿಗಳೆ ಸ್ಪಷ್ಟಪಡಿಸಲಿದ್ದಾರೆ. ತಾನು ಶಾಲಾ ಶಿಕ್ಷಣ ಇಲಾಖೆಯ ಕೆಲಸಗಳತ್ತ ಗಮನಹರಿಸುತ್ತಿದ್ದೇನೆ ಎಂದು ಮಧು ಬಂಗಾರಪ್ಪ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗಿನ ರಾಜಕೀಯ ವಾಗ್ವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಮಧು ಬಂಗಾರಪ್ಪ ಬಗ್ಗೆ ಹೆಚ್ಚು ಮಾತನಾಡಬೇಡ ಎಂದು ಯಡಿಯೂರಪ್ಪ ತಮ್ಮ ಮಗ ವಿಜಯೇಂದ್ರ ಅವರಿಗೆ ಹೇಳಿದ್ದಾರೆ. ಬಂಗಾರಪ್ಪ ಅವರ ಶಕ್ತಿ ಏನೆಂಬುದು ಅವರಿಗೆ ಗೊತ್ತಿದೆ. ನನ್ನನ್ನು ಕೆಣಕಲು ಬಂದರೆ ನಾನು ಬುಡಕ್ಕೆ ಕೈ ಹಾಕುತ್ತೇನೆ. ವಿಜಯೇಂದ್ರ ತಮ್ಮ ತಂದೆಯನ್ನೇ ಜೈಲಿಗೆ ಕಳುಹಿಸಿದವರು. ಅವರು ಯಾವ ಪುರುಷಾರ್ಥಕ್ಕೆ ವಿಜಯ್ ಯಾತ್ರೆ ಮಾಡುತ್ತಿದ್ದಾರೋ. ಏನು ವಿಜಯ ಸಾಧಿಸಿದ್ದಾರೆ ನೀವೇ ತಿಳಿದುಕೊಳ್ಳಿ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಉಪಸ್ಥಿತರಿದ್ದರು.