ಸಿಡಬ್ಲ್ಯುಎಂಎ ಸಭೆ ನಂತರ ಮುಖ್ಯಮಂತ್ರಿ ಜೊತೆ ಚರ್ಚಿಸಿ ನಾಲೆಗಳಿಗೆ ನೀರು : ಎನ್. ಚಲುವರಾಯಸ್ವಾಮಿ
ಬೆಂಗಳೂರು : ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ) ಹಾಗೂ ಕಾವೇರಿ ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‍ಸಿ)ಸಭೆ ಬುಧವಾರ ದಿಲ್ಲಿಯಲ್ಲಿ ನಡೆಯಲಿದ್ದು, ನಮ್ಮ ರಾಜ್ಯದ ಅಧಿಕಾರಿಗಳು ರಾಜ್ಯದ ವಸ್ತುಸ್ಥಿತಿಯನ್ನು, ಕುಡಿಯುವ ನೀರು ಹಾಗೂ ಬೆಳೆಗಳ ಪರಿಸ್ಥಿತಿಯನ್ನು ಸಮರ್ಥವಾಗಿ ಮಂಡಿಸಲಿದ್ದಾರೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಗಳವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಸಭೆಯ ತೀರ್ಮಾನ ಏನಾಗುತ್ತದೆ ಎಂಬುದನ್ನು ನೋಡಿಕೊಂಡು, ತಕ್ಷಣವೇ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಿ ಮಂಡ್ಯ ಜಿಲ್ಲೆಯಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಬಿಡುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಬ್ಬು ಹಾಗೂ ಕೆರೆ-ಕಟ್ಟೆಗಳಿಗೆ ನೀರು ಬಿಡಬೇಕು ಎಂಬ ರೈತರ ಬೇಡಿಕೆ ನ್ಯಾಯಯುತವಾಗಿದೆ. ಈ ಬಗ್ಗೆ ವಿರೋಧಪಕ್ಷಗಳು ಕೂಡ ಸರಕಾರವನ್ನು ಆಗ್ರಹಿಸುತ್ತಿವೆ. ಸಂಕಷ್ಟದ ಸಮಯದಲ್ಲಿ ರೈತರ ಪರವಾಗಿ ನಿಲ್ಲುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ರೈತರ ಹಿತ ಕಾಯುವುದು ನಮ್ಮ ಮೊದಲ ಆದ್ಯತೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಆದರೆ ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಜಲಾಶಯಗಳಲ್ಲಿ ನೀರಿನ ಕೊರತೆಯಾಗಿದೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ. ಈಗಾಗಲೆ ಜಿಲ್ಲೆಯ ಎಲ್ಲ ಶಾಸಕರು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇವೆ. ಮುಖ್ಯಮಂತ್ರಿ ಈ ವಿಷಯವನ್ನು ಸಕಾರಾತ್ಮಕವಾಗಿ ಸ್ಪಂದಿಸಿ, ನಾಳಿನ ಸಭೆಯನ್ನು ನೋಡಿಕೊಂಡು ನೀರು ಬಿಡೋಣ ಎಂದು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ದಿನಗಳಲ್ಲಿ ಮಳೆ ಬರುವ ಸಂಭವ ಕೂಡ ಇದೆ. ಕೆಆರ್ ಎಸ್ ಜಲಾಶಯ ತುಂಬುವ ಆಶಯ ಕೂಡ ನಮಗಿದೆ. ರೈತರು ಬಿತ್ತನೆಗೆ ಇನ್ನೂ ಅವಕಾಶ ಇದೆ. ಆದುದರಿಂದ, ಜಿಲ್ಲೆಯ ರೈತ ಬಾಂಧವರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ.
ಇದು ರೈತರ ಬದುಕು-ಸಾವಿನ ಪ್ರಶ್ನೆ. ಈ ಸೂಕ್ಷ್ಮ ವಿಷಯದಲ್ಲಿ ಯಾರೂ ರಾಜಕೀಯ ಮಾಡುವುದು ಬೇಡ ಎಂದು ಎಲ್ಲ ಪಕ್ಷದ ನಾಯಕರಲ್ಲಿ ಮನವಿ ಮಾಡಿದ ಚಲುವರಾಯಸ್ವಾಮಿ, ಜಿಲ್ಲೆಯ ರೈತ ಬಾಂಧವರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಂಡು ಸರಕಾರದ ಜೊತೆ ಸಹಕರಿಸಬೇಕು. ಸರಕಾರ ನಿಮ್ಮ ಜೊತೆಗಿದೆ ಎಂದು ತಿಳಿಸಿದ್ದಾರೆ.