ಸೋನಮ್ ವಾಂಗ್‌ಚುಕ್ ಉಪವಾಸ: ರಾಷ್ಟ್ರಪತಿ ಮಧ್ಯಪ್ರವೇಶಕ್ಕೆ ʼಕರ್ನಾಟಕ ನಾಗರಿಕ ಸಮಾಜʼದ ಆಗ್ರಹ
Image Credit: PTI
ಬೆಂಗಳೂರು : ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹಾಗೂ ಪರೀಕ್ಷಾ ಆಡಳಿತದ ವೈಫಲ್ಯಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ಆಗ್ರಹಿಸಿ ಹೊಸದಿಲ್ಲಿಯ ಜಂತರ್ ಮಂತರ್ ನಲ್ಲಿ ಶಿಕ್ಷಣತಜ್ಞ ಸೋನಮ್ ವಾಂಗ್‌ಚುಕ್ ಹಾಗೂ ವಿದ್ಯಾರ್ಥಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ, ಅವರ ರಕ್ಷಣೆಗಾಗಿ ತಕ್ಷಣ ಮಧ್ಯಪ್ರವೇಶಿಸುವಂತೆ ಕರ್ನಾಟಕ ನಾಗರಿಕ ಸಮಾಜದ ಸದಸ್ಯರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಿದ್ದಾರೆ.
ಜುಲೈ 14ರಂದು ರಾಷ್ಟ್ರಪತಿಗೆ ಸಲ್ಲಿಸಿರುವ ಪತ್ರದಲ್ಲಿ, ಉಪವಾಸ ಸತ್ಯಾಗ್ರಹವು ಹದಿನಾರು ದಿನಗಳಿಗೂ ಹೆಚ್ಚು ಕಾಲದಿಂದ ಮುಂದುವರಿದಿದ್ದು, ಸಾರ್ವಜನಿಕ ಪರೀಕ್ಷೆಗಳಲ್ಲಿ ನಡೆದಿರುವ ಗಂಭೀರ ಅಕ್ರಮಗಳು, ಆಪಾದಿತ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಆಡಳಿತದ ವೈಫಲ್ಯಗಳು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ಅನುಭವಿಸಿರುವ ಸಂಕಷ್ಟಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.
ಪರೀಕ್ಷಾ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಸೇರಿದಂತೆ ಉನ್ನತ ಮಟ್ಟದಲ್ಲಿ ಜವಾಬ್ದಾರಿಯನ್ನು ನಿಗದಿಪಡಿಸಬೇಕು. ಪರೀಕ್ಷಾ ಬಿಕ್ಕಟ್ಟಿನ ಪರಿಣಾಮ ಜೀವ ಕಳೆದುಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಬೆಂಬಲ ನೀಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿಭಟನಾಕಾರರ ಬೇಡಿಕೆಗಳನ್ನು ವೈಯಕ್ತಿಕ ಅಥವಾ ಪಕ್ಷಪಾತದ ಬೇಡಿಕೆಗಳೆಂದು ತಳ್ಳಿಹಾಕಲು ಸಾಧ್ಯವಿಲ್ಲ. ಅವು ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ಸಮಗ್ರತೆ, ಸಮಾನ ಅವಕಾಶ, ಸಾಂಸ್ಥಿಕ ಹೊಣೆಗಾರಿಕೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳಾಗಿವೆ ಎಂದು ಹೇಳಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳು ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಪ್ರಗತಿಗೆ ಪ್ರವೇಶವನ್ನು ನಿರ್ಧರಿಸುತ್ತವೆ. ಅವುಗಳ ಸಮಗ್ರತೆಗೆ ಧಕ್ಕೆಯಾದಾಗ ಅದರ ಪರಿಣಾಮ ಬಡ, ಗ್ರಾಮೀಣ, ಅಂಚಿನಲ್ಲಿರುವ ಹಾಗೂ ಮೊದಲ ತಲೆಮಾರಿನ ವಿದ್ಯಾರ್ಥಿಗಳ ಮೇಲೆ ಗಂಭೀರವಾಗಿ ಬೀಳುತ್ತದೆ. ಇಂತಹ ಕುಟುಂಬಗಳು ವರ್ಷಗಳ ಶ್ರಮ ಮತ್ತು ತಮ್ಮ ಸೀಮಿತ ಸಂಪನ್ಮೂಲಗಳನ್ನು ಪರೀಕ್ಷಾ ಸಿದ್ಧತೆಗೆ ವಿನಿಯೋಗಿಸುತ್ತವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಆರೋಗ್ಯದ ಬಗ್ಗೆ ತೀವ್ರ ಕಳವಳ
ಸೋನಮ್ ವಾಂಗ್‌ಚುಕ್ ಹಾಗೂ ಇತರ ಉಪವಾಸ ನಿರತ ಪ್ರತಿಭಟನಾಕಾರರ ಆರೋಗ್ಯವು ಗಂಭೀರವಾಗಿ ಹದಗೆಟ್ಟಿದೆ ಎಂಬ ವರದಿಗಳಿಂದ ತೀವ್ರ ಆತಂಕ ವ್ಯಕ್ತಪಡಿಸಿರುವ ನಾಗರಿಕ ಸಮಾಜದ ಸದಸ್ಯರು, ದೀರ್ಘಕಾಲದ ಉಪವಾಸವು ಅವರ ಜೀವಕ್ಕೆ ತಕ್ಷಣದ ಮತ್ತು ನಿರೀಕ್ಷಿತ ಅಪಾಯವನ್ನುಂಟುಮಾಡುತ್ತಿದೆ ಎಂದು ಹೇಳಿದ್ದಾರೆ.
ಉಪವಾಸ ನಿರತ ಪ್ರತಿಭಟನಾಕಾರರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರದ ಮೌನ ಮುಂದುವರಿದಷ್ಟೂ ಅವರ ಆರೋಗ್ಯದ ಮೇಲೆ ಗಂಭೀರ ಮತ್ತು ಸರಿಪಡಿಸಲಾಗದ ಪರಿಣಾಮಗಳು ಉಂಟಾಗುವ ಅಪಾಯ ಹೆಚ್ಚುತ್ತಿದೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಚಲಾಯಿಸುತ್ತಿರುವ ನಾಗರಿಕರ ಜೀವಕ್ಕೆ ಅಪಾಯ ಎದುರಾಗಿರುವಾಗ ಸರ್ಕಾರವು ನಿಷ್ಕ್ರಿಯವಾಗಿ ಇರಬಾರದು ಎಂದು ಪತ್ರದಲ್ಲಿ ಹೇಳಲಾಗಿದೆ.
ಸಂವಿಧಾನದ 21ನೇ ವಿಧಿಯು ಜೀವ ಮತ್ತು ಘನತೆಯ ಹಕ್ಕನ್ನು ಖಾತರಿಪಡಿಸಿದ್ದು, ಮಾನವ ಜೀವವನ್ನು ರಕ್ಷಿಸುವ ಸಕಾರಾತ್ಮಕ ಜವಾಬ್ದಾರಿಯನ್ನು ರಾಜ್ಯದ ಮೇಲೆ ಹೊರಿಸಿದೆ. 19ನೇ ವಿಧಿಯಡಿ ಖಾತರಿಪಡಿಸಿರುವ ವಾಕ್ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಪ್ರಜಾಪ್ರಭುತ್ವ ಪ್ರತಿಭಟನೆಯ ಹಕ್ಕುಗಳನ್ನು ಸರ್ಕಾರದ ಉದಾಸೀನತೆಯಿಂದ ಅರ್ಥಹೀನಗೊಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಸಾಂವಿಧಾನಿಕ ಮತ್ತು ರಾಜಕೀಯ ಇತಿಹಾಸದಲ್ಲಿ ಶಾಂತಿಯುತ ಸತ್ಯಾಗ್ರಹಕ್ಕೆ ವಿಶಿಷ್ಟ ಸ್ಥಾನವಿದೆ. ಅದಕ್ಕೆ ಮೌನ, ಬಲವಂತ, ಬಲವಂತದ ತೆರವು ಅಥವಾ ಅಪರಾಧೀಕರಣದ ಮೂಲಕ ಪ್ರತಿಕ್ರಿಯಿಸುವುದು ಪ್ರಜಾಪ್ರಭುತ್ವ ಗಣರಾಜ್ಯದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
►ಸಚಿವರ ಹೊಣೆಗಾರಿಕೆ ನಿಗದಿಗೆ ಒತ್ತಾಯ
ಪ್ರತಿಭಟನಾಕಾರರು ಕೋರುತ್ತಿರುವ ರಾಜೀನಾಮೆ ಮೂಲತಃ ಸಚಿವರ ಹೊಣೆಗಾರಿಕೆಯನ್ನು ಒತ್ತಾಯಿಸುವ ಬೇಡಿಕೆಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ವೈಫಲ್ಯಗಳು ಪುನರಾವರ್ತಿತವಾಗಿ ಸಂಭವಿಸಿ, ವ್ಯವಸ್ಥಿತವಾಗಿ ಲಕ್ಷಾಂತರ ಜನರ ಬದುಕಿನ ಮೇಲೆ ಪರಿಣಾಮ ಬೀರಿದಾಗ ಜವಾಬ್ದಾರಿಯನ್ನು ಅಧೀನ ಅಧಿಕಾರಿಗಳು ಅಥವಾ ಪರೀಕ್ಷಾ ಸಂಸ್ಥೆಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಆಡಳಿತಾತ್ಮಕ, ಸಾಂಸ್ಥಿಕ ಹಾಗೂ ರಾಜಕೀಯ ಹೊಣೆಗಾರಿಕೆಯನ್ನು ನ್ಯಾಯಸಮ್ಮತ ಮತ್ತು ಪಾರದರ್ಶಕ ಪ್ರಕ್ರಿಯೆಯ ಮೂಲಕ ನಿರ್ಧರಿಸಬೇಕು ಎಂದು ಪತ್ರದಲ್ಲಿ ಹೇಳಿದ್ದಾರೆ.
ಪರೀಕ್ಷಾ ಬಿಕ್ಕಟ್ಟು ಕೇವಲ ಪರೀಕ್ಷೆಯ ರದ್ದತಿ ಅಥವಾ ಮರುನಿಗದಿಗೆ ಸೀಮಿತವಾಗಿಲ್ಲ. ಅದು ಆತಂಕ, ಆರ್ಥಿಕ ನಷ್ಟ, ಶೈಕ್ಷಣಿಕ ವರ್ಷಗಳ ನಷ್ಟ, ಮಾನಸಿಕ ಆಘಾತ ಮತ್ತು ಸಾರ್ವಜನಿಕ ಸಂಸ್ಥೆಗಳ ಮೇಲಿನ ವಿಶ್ವಾಸದ ಕುಸಿತಕ್ಕೆ ಕಾರಣವಾಗಿದೆ. ಪರೀಕ್ಷಾ ಒತ್ತಡ ಮತ್ತು ಆಡಳಿತಾತ್ಮಕ ವೈಫಲ್ಯಗಳಿಗೆ ಸಂಬಂಧಿಸಿದ ವಿದ್ಯಾರ್ಥಿಗಳ ಆತ್ಮಹತ್ಯೆಗಳ ವರದಿಗಳು ನಿರಾಕರಣೆ ಅಥವಾ ವಿಳಂಬಕ್ಕಿಂತ ಸಹಾನುಭೂತಿಯ ಮತ್ತು ಸಮಗ್ರ ಪ್ರತಿಕ್ರಿಯೆಯನ್ನು ಕೋರುತ್ತವೆ ಎಂದು ಉಲ್ಲೇಖಿಸಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಅರ್ಥಪೂರ್ಣ ಹಾಗೂ ಸಮಯಬದ್ಧ ಸಂವಾದ ನಡೆಸದಿರುವುದು ದೇಶದ ಯುವಜನತೆಗೆ ತಪ್ಪು ಸಂದೇಶ ರವಾನಿಸುತ್ತಿದೆ. ತಾರ್ಕಿಕ, ಶಾಂತಿಯುತ ಹಾಗೂ ನೈತಿಕ ಪ್ರತಿಭಟನೆಗಳಿಗಿಂತ ರಾಜಕೀಯ ಒತ್ತಡ ಅಥವಾ ವಿಚ್ಛಿದ್ರಕಾರಕ ಕ್ರಮಗಳಿಗೆ ಮಾತ್ರ ಸರ್ಕಾರ ಸ್ಪಂದಿಸುತ್ತದೆ ಎಂಬ ಅಭಿಪ್ರಾಯ ಮೂಡುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
►11 ಕ್ರಮಗಳಿಗೆ ಆಗ್ರಹ
ಗಣರಾಜ್ಯದ ಮುಖ್ಯಸ್ಥೆಯಾದ ರಾಷ್ಟ್ರಪತಿಯವರು ತಮ್ಮ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿಯಲ್ಲಿ ಮಧ್ಯಪ್ರವೇಶಿಸಿ, ಕೇಂದ್ರ ಸರ್ಕಾರವು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
• ಸೋನಮ್ ವಾಂಗ್‌ಚುಕ್ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ತಕ್ಷಣ ನೇರ ಮತ್ತು ಸೌಹಾರ್ದಯುತ ಸಂವಾದ ಆರಂಭಿಸಬೇಕು.
• ಪ್ರತಿಭಟನಾಕಾರರ ಒಪ್ಪಿಗೆ ಮತ್ತು ಘನತೆಯನ್ನು ಗೌರವಿಸಿ, ಅವರ ಜೀವ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಂಡು, ನಿರಂತರ, ಸ್ವತಂತ್ರ ಮತ್ತು ಸೂಕ್ತ ವೈದ್ಯಕೀಯ ಆರೈಕೆ ಒದಗಿಸಬೇಕು.
• ಪ್ರತಿಭಟನಾಕಾರರು ಮುಂದಿಟ್ಟಿರುವ ಪ್ರತಿಯೊಂದು ಪ್ರಮುಖ ಬೇಡಿಕೆಗೆ ಔಪಚಾರಿಕ, ತಾರ್ಕಿಕ ಮತ್ತು ಸಮಯಬದ್ಧ ಪ್ರತಿಕ್ರಿಯೆ ನೀಡಬೇಕು.
• ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು, ಆಡಳಿತಾತ್ಮಕ ವೈಫಲ್ಯಗಳು ಹಾಗೂ ಸಂಬಂಧಿತ ನಿರ್ಲಕ್ಷ್ಯದ ಕುರಿತು ಸ್ವತಂತ್ರ, ವಿಶ್ವಾಸಾರ್ಹ ಮತ್ತು ಸಮಯಬದ್ಧ ನ್ಯಾಯಾಂಗ ಅಥವಾ ಸಮಾನ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು.
• ತನಿಖೆಯ ಆಧಾರದ ಮೇಲೆ ವೈಯಕ್ತಿಕ, ಸಾಂಸ್ಥಿಕ ಹಾಗೂ ಸಚಿವರ ಹೊಣೆಗಾರಿಕೆಯನ್ನು ನಿಗದಿಪಡಿಸಿ, ತಪ್ಪಿತಸ್ಥರ ವಿರುದ್ಧ ಅವರ ಹುದ್ದೆ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಸೂಕ್ತ ಕ್ರಮ ಕೈಗೊಳ್ಳಬೇಕು.
• ಸಚಿವರ ಹೊಣೆಗಾರಿಕೆ ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಯ ತತ್ವಗಳಿಗೆ ಅನುಗುಣವಾಗಿ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಕುರಿತ ಬೇಡಿಕೆಯನ್ನು ಪರಿಗಣಿಸಬೇಕು.
• ಆತ್ಮಹತ್ಯೆಯಿಂದ ಮೃತಪಟ್ಟ ಅಥವಾ ಪರೀಕ್ಷಾ ಬಿಕ್ಕಟ್ಟಿನಿಂದ ಸರಿಪಡಿಸಲಾಗದ ಹಾನಿಗೊಳಗಾದ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯಯುತ ಪರಿಹಾರ, ಸಮಾಲೋಚನೆ, ಕಾನೂನು ನೆರವು ಹಾಗೂ ಅಗತ್ಯ ಬೆಂಬಲ ಒದಗಿಸಬೇಕು.
• ಸಾರ್ವಜನಿಕ ಪರೀಕ್ಷೆಗಳ ಭದ್ರತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವ ಸ್ವತಂತ್ರ ರಾಷ್ಟ್ರೀಯ ವ್ಯವಸ್ಥೆಯನ್ನು ರೂಪಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ, ಅನಿಯಂತ್ರಿತ ಪರೀಕ್ಷಾ ನಿರ್ಧಾರಗಳು ಹಾಗೂ ಕುಂದುಕೊರತೆ ಪರಿಹಾರದಲ್ಲಿನ ವಿಳಂಬಗಳನ್ನು ತಡೆಯುವ ಕಟ್ಟುನಿಟ್ಟಿನ ರಕ್ಷಣಾ ಕ್ರಮಗಳನ್ನು ಇದರಲ್ಲಿ ಒಳಗೊಳ್ಳಬೇಕು.
• ರದ್ದುಗೊಂಡ, ಮುಂದೂಡಲ್ಪಟ್ಟ, ಪ್ರಶ್ನೆಪತ್ರಿಕೆ ಸೋರಿಕೆಯಾದ ಅಥವಾ ಅಸಮರ್ಪಕವಾಗಿ ನಡೆಸಲಾದ ಪರೀಕ್ಷೆಗಳಿಂದ ಬಾಧಿತರಾದ ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭ್ಯವಾಗುವ, ಸಮಯಬದ್ಧ ಕುಂದುಕೊರತೆ ಪರಿಹಾರ ಮತ್ತು ಪರಿಹಾರ ವ್ಯವಸ್ಥೆ ರೂಪಿಸಬೇಕು.
• ಶಾಂತಿಯುತ ಪ್ರತಿಭಟನಾಕಾರರು, ವಿದ್ಯಾರ್ಥಿಗಳು, ಸ್ವಯಂಸೇವಕರು, ಪತ್ರಕರ್ತರು ಅಥವಾ ಚಳುವಳಿಯನ್ನು ಬೆಂಬಲಿಸುವ ನಾಗರಿಕ ಸಮಾಜದ ಸದಸ್ಯರ ವಿರುದ್ಧ ಯಾವುದೇ ಬಲವಂತದ, ಶಿಕ್ಷಾತ್ಮಕ ಅಥವಾ ಪ್ರತೀಕಾರದ ಕ್ರಮ ಕೈಗೊಳ್ಳದಂತೆ ನೋಡಿಕೊಳ್ಳಬೇಕು.
• ಪರೀಕ್ಷಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಸರಿಪಡಿಸುವ ಮತ್ತು ತಡೆಗಟ್ಟುವ ಕ್ರಮಗಳ ಕುರಿತು ಸಮಗ್ರ 'ಕ್ರಮ ಕೈಗೊಂಡ ವರದಿ'ಯನ್ನು ಸಾರ್ವಜನಿಕರ ಮುಂದೆ ಪ್ರಕಟಿಸಬೇಕು.
ಇದಲ್ಲದೆ, ಉಪವಾಸ ನಿರತ ಪ್ರತಿಭಟನಾಕಾರರ ಆರೋಗ್ಯ ಸ್ಥಿತಿ, ಅವರ ಜೀವ ರಕ್ಷಣೆಗಾಗಿ ಕೈಗೊಂಡಿರುವ ಕ್ರಮಗಳು, ಅವರೊಂದಿಗೆ ನಡೆದಿರುವ ಸಂವಾದದ ಸ್ಥಿತಿ ಹಾಗೂ ಪರೀಕ್ಷಾ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಸರ್ಕಾರದಿಂದ ತುರ್ತು ವರದಿ ಪಡೆಯುವಂತೆ ರಾಷ್ಟ್ರಪತಿಯವರನ್ನು ಮನವಿಯಲ್ಲಿ ಕೋರಲಾಗಿದೆ.
ಸೋನಮ್ ವಾಂಗ್‌ಚುಕ್ ಹಾಗೂ ಉಪವಾಸ ನಿರತ ವಿದ್ಯಾರ್ಥಿಗಳ ಹೋರಾಟಕ್ಕೆ ಕರ್ನಾಟಕ ನಾಗರಿಕ ಸಮಾಜ ಬೆಂಬಲ ಸೂಚಿಸಿದ್ದು, ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಆಗ್ರಹಿಸುತ್ತಿರುವ ವಿದ್ಯಾರ್ಥಿ ಸಮುದಾಯದೊಂದಿಗೆ ಐಕ್ಯತೆ ವ್ಯಕ್ತಪಡಿಸಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.
ಪ್ರತಿಭಟನಾಕಾರರ ಜೀವ ರಕ್ಷಣೆ ಮತ್ತು ಅವರ ನ್ಯಾಯಸಮ್ಮತ ಬೇಡಿಕೆಗಳ ಪರಿಹಾರವನ್ನು ಸರ್ಕಾರದ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಗಣಿಸಬಾರದು. ಮಾನವ ಜೀವಗಳು ಅಪಾಯದಲ್ಲಿರುವಾಗ ಯಾವುದೇ ಪ್ರಜಾಪ್ರಭುತ್ವ ಸರ್ಕಾರವು ಭಿನ್ನಾಭಿಪ್ರಾಯವನ್ನು ಅಹಂಕಾರದ ಸಂಘರ್ಷವನ್ನಾಗಿ ಪರಿವರ್ತಿಸಬಾರದು ಎಂದು ಮನವಿಯಲ್ಲಿ ಹೇಳಲಾಗಿದೆ.
ತಡೆಗಟ್ಟಬಹುದಾದ ಜೀವಹಾನಿ ಸಂಭವಿಸುವ ಮೊದಲು ವಿಳಂಬವಿಲ್ಲದೆ ಮಧ್ಯಪ್ರವೇಶಿಸಿ, ಸಮಯೋಚಿತ ಸಂವಾದ, ವೈದ್ಯಕೀಯ ರಕ್ಷಣೆ, ಸಾಂಸ್ಥಿಕ ಹೊಣೆಗಾರಿಕೆ ಹಾಗೂ ಪಾರದರ್ಶಕ ನಿರ್ಧಾರಗಳ ಮೂಲಕ ಸಂವಿಧಾನದ ಘನತೆಯನ್ನು ಎತ್ತಿಹಿಡಿಯಬೇಕು ಎಂದು ಮನವಿ ಮಾಡಲಾಗಿದೆ.
ಈ ಮನವಿಗೆ ಡಾ. ನಿರಂಜನರಾಧ್ಯ ವಿ.ಪಿ., ಬಸವರಾಜ ಸೂಳಿಭಾವಿ, ಡಾ. ಅನುಪಮಾ ಡಾಕ್ಟರ್, ಡಾ. ರವೀಂದ್ರ ಬೆಳ್ಳಿ, ಕೇಶವ ಶರ್ಮ, ವಸುಂದರಾ ಭೂಪತಿ, ಕೆ.ಪಿ. ಸುರೇಶ್, ಗಂಗಾಧರ ಹಿರೇಗುತ್ತಿ, ಸತೀಶ್ ಚಪ್ಪರಿಕೆ, ಅನಿಲ್ ಹೊಸಮನಿ ಸೇರಿದಂತೆ ಶಿಕ್ಷಣತಜ್ಞರು, ಲೇಖಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಕಲಾವಿದರು, ವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ಒಟ್ಟು 66 ಮಂದಿ ಸಹಿ ಹಾಕಿದ್ದಾರೆ.