ಬೆಂಗಳೂರು : ಅಲ್ಪಸಂಖ್ಯಾತ ಸಮುದಾಯದ ಉದ್ಯಮಶೀಲತೆಗೆ ಉತ್ತೇಜನ ನೀಡುವುದು, ಕೈಗಾರಿಕಾ ವಲಯದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ನವೋದ್ಯಮಗಳಿಗೆ ಸೂಕ್ತ ನೀತಿ ಬೆಂಬಲ ಒದಗಿಸುವ ಉದ್ದೇಶದಿಂದ ಮುಸ್ಲಿಮ್ ಕೈಗಾರಿಕೋದ್ಯಮಿಗಳ ಸಂಘ (ಎಂಐಎ) ಅ.31ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನಲ್ಲಿ ‘ಉಡಾನ್-2026 ಅಲ್ಪಸಂಖ್ಯಾತ ಉದ್ಯಮಶೀಲತೆಯ ಉನ್ನತೀಕರಣ’ ಕಾರ್ಯಕ್ರಮ ಆಯೋಜಿಸಿದೆ ಎಂದು ಎಂಐಎ ಅಧ್ಯಕ್ಷ ಅಬ್ದುಲ್ ರಶೀದ್ ಬಿ.ಜೆ. ತಿಳಿಸಿದರು.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‍ಬಿಆರ್ ಲೇಔಟ್‍ನ ಬ್ಯಾರೀಸ್ ಸೌಹಾರ್ದ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ರಿಝ್ವಾನ್ ಅರ್ಶದ್, ಸಭಾಪತಿ ಸಲೀಂ ಅಹ್ಮದ್, ಸಿಎಂ ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿಖಾನ್, ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಹೂಡಿಕೆದಾರರು, ನವೋದ್ಯಮಗಳ ಸಂಸ್ಥಾಪಕರು ಹಾಗೂ ವಿವಿಧ ವಾಣಿಜ್ಯ ಸಂಘಟನೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವುದರ ಜತೆಗೆ ಉದ್ಯಮಶೀಲತೆಯ ಬೆಳವಣಿಗೆಗೆ ಅಗತ್ಯವಾದ ನೀತಿ ಬೆಂಬಲ ಪಡೆಯುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಕೈಗಾರಿಕಾ ಸಬ್ಸಿಡಿಗಳ ಸಮರ್ಪಕ ವಿತರಣೆ, ಸರಕಾರಿ ಅನುದಾನಗಳ ಸುಲಭ ಲಭ್ಯತೆ, ಉದ್ಯಮಶೀಲತಾ ಅಭಿವೃದ್ಧಿ ಹಾಗೂ ಉದ್ಯಮಗಳಿಗೆ ಪೂರಕವಾದ ನೀತಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ‘ಉಡಾನ್ 2026’ ವೇದಿಕೆಯಲ್ಲಿ ಸಂಬಂಧಪಟ್ಟ ಸಚಿವರಿಗೆ ಬೇಡಿಕೆಗಳು ಮತ್ತು ಶಿಫಾರಸುಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಅಬ್ದುಲ್ ರಶೀದ್ ತಿಳಿಸಿದರು.

ಎಂಐಎ ಕಾರ್ಯದರ್ಶಿ ಮೀರ್ ಅಬ್ದುಲ್ ಹಫೀಝ್ ಮಾತನಾಡಿ, ಸರಕಾರ ಮತ್ತು ವ್ಯಾಪಾರ ಸಮುದಾಯದ ನಡುವೆ ರಚನಾತ್ಮಕ ಸಂವಾದಕ್ಕೆ ಅವಕಾಶ ಕಲ್ಪಿಸುವ ಮೂಲಕ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಹಾಗೂ ಹೊಸ ಉದ್ಯಮಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ನಮ್ಮ ಸಂಘದ ಉದ್ದೇಶವಾಗಿದೆ. ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ನವೋದ್ಯಮಗಳ ಪಾತ್ರವನ್ನು ಗುರುತಿಸಿ, ರಾಜ್ಯ ಸರಕಾರ ಹಾಗೂ ಸಂಬಂಧಿತ ಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿದೆ ಎಂದು ಹೇಳಿದರು.

ಎಂಐಎ ಜಂಟಿ ಕಾರ್ಯದರ್ಶಿ ಮುಹಮ್ಮದ್ ಅಝ್ಮತುಲ್ಲಾ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದಲ್ಲಿ ನಾವೀನ್ಯತೆ ಮತ್ತು ಉದ್ಯೋಗ ಸೃಷ್ಟಿಯ ಸಾಮರ್ಥ್ಯ ಹೊಂದಿರುವ 30 ಭರವಸೆಯ ನವೋದ್ಯಮಗಳು ಹಾಗೂ ಉದ್ಯಮಿಗಳನ್ನು ಗುರುತಿಸಿ ‘ಉಡಾನ್ 2026’ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಆಯ್ಕೆಯಾದ ಉದ್ಯಮಿಗಳಿಗೆ ತಮ್ಮ ಉದ್ಯಮದ ಪರಿಕಲ್ಪನೆ, ಉತ್ಪನ್ನಗಳು ಮತ್ತು ಸೇವೆಗಳನ್ನು ಹೂಡಿಕೆದಾರರು ಹಾಗೂ ಉದ್ಯಮ ಕ್ಷೇತ್ರದ ಗಣ್ಯರ ಮುಂದೆ ಪರಿಚಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಮೂಲಕ ಬಂಡವಾಳ ಹೂಡಿಕೆ, ಮಾರುಕಟ್ಟೆ ವಿಸ್ತರಣೆ ಮತ್ತು ಹೊಸ ವ್ಯವಹಾರ ಸಂಬಂಧಗಳನ್ನು ಬೆಳೆಸಿಕೊಳ್ಳಲು ವೇದಿಕೆ ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವು ಹೊಸ ಉದ್ಯಮಗಳು ಮತ್ತು ಈಗಾಗಲೇ ಸ್ಥಾಪಿತವಾಗಿರುವ ಕೈಗಾರಿಕೆಗಳ ನಡುವೆ ಸಹಕಾರವನ್ನು ಬೆಳೆಸುವ ಉದ್ದೇಶವನ್ನೂ ಹೊಂದಿದೆ. ಜ್ಞಾನ ವಿನಿಮಯ, ಹೂಡಿಕೆ ಅವಕಾಶಗಳ ಅನ್ವೇಷಣೆ ಹಾಗೂ ಭವಿಷ್ಯದ ಉದ್ಯಮ ವಿಸ್ತರಣೆಗೆ ಇದು ನೆರವಾಗಲಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಂಐಎ ಉಪಾಧ್ಯಕ್ಷ ತಾಹೀರ್ ಶರೀಫ್, ಖಜಾಂಚಿ ಹಿದಾಯತುಲ್ಲಾ, ಜಂಟಿ ಖಜಾಂಚಿ ಮುನೀರ್ ಅಹ್ಮದ್, ಕಾರ್ಯಕ್ರಮದ ಮುಖ್ಯಸ್ಥ ಹಾಗೂ ಕೌನ್ಸಿಲ್ ಸದಸ್ಯ ಸುಹೇಲ್ ಎಚ್.ಎ., ಕೌನ್ಸಿಲ್ ಸದಸ್ಯರಾದ ಶಫಿ ಮತ್ತು ಶೋಯೆಬ್ ವಲೈ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor