Bengaluru | ಎಸ್ಐಆರ್ ವಿರುದ್ಧ ಪ್ರತಿಭಟನೆ: 50 ಮಂದಿ ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್)ವಿರುದ್ಧ ಹಾಗೂ ದಿಲ್ಲಿಯಲ್ಲಿನ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ, ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ ವತಿಯಿಂದ ನಗರದ ಪುರಭವನದ ಬಳಿ ಪ್ರತಿಭಟನೆ ನಡೆಸಿದ 50ಕ್ಕೂ ಅಧಿಕ ಮಂದಿ ಪ್ರತಿಭಟನಾಕಾರರನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದು, ಅನಂತರ ಬಿಡುಗಡೆಗೊಳಿಸಿದ ಘಟನೆ ನಡೆದಿದೆ.
ಅ.16ರಂದು ದಿಲ್ಲಿಯಲ್ಲಿ ಹೋರಾಟಗಾರ್ತಿ ನೇಹಾ ಬೋರಾ ಅವರನ್ನು ರಾತ್ರಿಯಿಡೀ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನೇಹಾ ಅವರ ಬಂಧನ ಖಂಡಿಸಿ, ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಲು ಮುಂದಾದರು.
ಈ ವೇಳೆ ಪೊಲೀಸರು, ‘ಫ್ರೀಡಂ ಪಾರ್ಕ್ ಹೊರತು ನಗರದಲ್ಲಿ ಬೇರೆಡೆ ಪ್ರತಿಭಟನೆಗೆ ಅವಕಾಶವಿಲ್ಲ’ ಎಂದು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇತ್ತೀಚೆಗೆ ನೀಡಿದ ಸೂಚನೆಗಳ ಹೊರತಾಗಿಯೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ. ಉಭಯ ನಾಯಕರು, ಬೆಂಗಳೂರು ಪೊಲೀಸರಿಗೆ, ಪ್ರತಿಭಟನಾಕಾರರೊಂದಿಗೆ ಸಹಕರಿಸುವಂತೆ ಮತ್ತು ಪ್ರತಿಭಟನೆಯ ಹಕ್ಕನ್ನು ಚಲಾಯಿಸಲು ಅನುಮತಿಸುವಲ್ಲಿ ನಿರಂಕುಶವಾಗಿ ವರ್ತಿಸದಂತೆ ನಿರ್ದೇಶನ ನೀಡಿದ್ದರು ಎಂದು ಐಸಾ ಸದಸ್ಯೆ ಅಕ್ವಿಲಿನ್ ತಿಳಿಸಿದರು.
ಪೊಲೀಸರು ಕೆಲವು ಪ್ರತಿಭಟನೆಗಳಿಗೆ ಮಾತ್ರ ಅನುಮತಿ ನೀಡುತ್ತಿದ್ದಾರೆ. ಉದಾಹರಣೆಗೆ, ಇತ್ತೀಚೆಗೆ ಎಬಿವಿಪಿ ಪ್ರತಿಭಟನೆಗೆ ಅವಕಾಶ ನೀಡಲಾಯಿತು; ಸಿಜೆಪಿಯ ತಿರಂಗಾ ಯಾತ್ರೆಗೆ ಅನುಮತಿ ನೀಡಲಾಯಿತು. ಆದರೆ ಯಾವುದೋ ಕಾರಣಕ್ಕಾಗಿ, ಐಸಾ (ಎಐಎಸ್ಎ) ಸಂಘಟನೆಗೆ ಫ್ರೀಡಂ ಪಾರ್ಕ್ನಿಂದ ಹೊರಗೆ ಪ್ರತಿಭಟನೆ ನಡೆಸಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಎಬಿವಿಪಿ ಪ್ರತಿಭಟನೆ ಜಯನಗರದಲ್ಲಿ ನಡೆಯಿತು, ತಿರಂಗಾ ಯಾತ್ರೆ ಟೌನ್ಹಾಲ್ ಬಳಿ ನಡೆಯಿತು. ಹಾಗಾಗಿ, ಯಾವುದಕ್ಕೆ ಅನುಮತಿ ಇದೆ. ಯಾವುದಕ್ಕೆ ಇಲ್ಲ ಎನ್ನುವುದರಲ್ಲಿ ಸ್ಪಷ್ಟವಾಗಿ ಒಂದು ನಿರಂಕುಶ ಧೋರಣೆ ಕಾಣಿಸುತ್ತಿದೆ ಎಂದು ತಿಳಿಸಿದರು.
‘ಪೊಲೀಸರೊಂದಿಗೆ ನಮ್ಮ ಕೈಲಾದಷ್ಟು ಮಟ್ಟಿಗೆ ಸಹಕರಿಸಲು ಪ್ರಯತ್ನಿಸುತ್ತಿದ್ದೇವೆ. ಎಸ್ಐಆರ್ ಬಗ್ಗೆ ಎಲ್ಲರ ಗಮನ ಸೆಳೆಯುವ ತುರ್ತು ಅಗತ್ಯವಿದೆ. ಏಕೆಂದರೆ ಈ ತಿಂಗಳಾಂತ್ಯಕ್ಕೆ ಕರ್ನಾಟಕದಲ್ಲಿ ಅಂತಿಮ ಕರಡು ಮತದಾರರ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ. ಈ ವಿಷಯದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಜೊತೆಗೆ ದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆಯೂ ಧ್ವನಿ ಎತ್ತಬೇಕಿದೆ’
-ಅಕ್ವಿಲಿನ್, ಐಸಾ ಸದಸ್ಯೆ