ಬೆಂಗಳೂರು : ಮಕ್ಕಳನ್ನು ಹೊಡೆಯುವ ಸರಕಾರವನ್ನು ಕೆಳಗಿಳಿಸುವುದು ಪ್ರಜೆಗಳ ಜವಾಬ್ದಾರಿ. ರೈತರನ್ನು ಹೊಡೆಯುವ ಸರಕಾರವನ್ನೂ ಬದಲಿಸಬೇಕು. ಆದರೆ, ಇದನ್ನು ಶಾಂತಿಯುತವಾಗಿ, ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕಿನ ಮೂಲಕವೇ ಮಾಡುತ್ತೇವೆ ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು, ದಲಿತರು, ವಿದ್ಯಾರ್ಥಿಗಳು ಮತ್ತು ಯುವಕರು ಬೀದಿಗಿಳಿದಿದ್ದಾರೆ. ಇಡೀ ದೇಶವನ್ನೇ ಜಂತರ್ ಮಂತರ್ ಮಾಡುತ್ತೇವೆ. ಅ.23ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೈತರು ಮತ್ತು ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟ ತೀವ್ರಗೊಳ್ಳಲಿದೆ. ಎಷ್ಟೇ ಪೊಲೀಸರು ಮತ್ತು ಸೈನಿಕರನ್ನು ನಿಯೋಜಿಸಿದರೂ ಜನರ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದರು.

ಎಸ್‍ಐಆರ್ ಪ್ರಕ್ರಿಯೆ, ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮಗಳನ್ನು ಖಂಡಿಸಿ, ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ನಡೆಸಲಾಗಿದೆ. ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಕ್ಯಾಮೆರಾಗಳನ್ನು ಕಿತ್ತುಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕಾರ್ಯವೈಖರಿ ಹಾಗೂ ಎಸ್‍ಐಆರ್ ಪ್ರಕ್ರಿಯೆಯನ್ನು ಜನರು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರೆ. ಚುನಾವಣಾ ಆಯೋಗವು ಜನರಿಗೆ ಉತ್ತರದಾಯಿಯಾಗಿರಬೇಕು ಎಂದು ಅವರು ತಿಳಿಸಿದರು.

ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಹೋರಾಟವನ್ನು ಉಲ್ಲೇಖಿಸಿದ ಅವರು, ರೈತರು ಮತ್ತು ದಲಿತ ಸಂಘಟನೆಗಳ ಒಗ್ಗಟ್ಟು ಜನಶಕ್ತಿಯನ್ನು ಹೆಚ್ಚಿಸಲಿದೆ. ಅಂಬೇಡ್ಕರ್ ಅವರ ಸಂವಿಧಾನ ಮತ್ತು ಗಾಂಧೀಜಿಯವರ ಸತ್ಯಾಗ್ರಹ ನಮ್ಮ ಶಕ್ತಿ. ಜನರ ಹಕ್ಕುಗಳನ್ನು ಹತ್ತಿಕ್ಕುವ ಸರಕಾರವನ್ನು ಬದಲಿಸುವ ಜವಾಬ್ದಾರಿ ಪ್ರಜೆಗಳ ಮೇಲಿದೆ. ನಾವು ಹೆದರುವುದಿಲ್ಲ; ಮತದಾನದ ಮೂಲಕವೇ ರಾಜಕೀಯ ಬದಲಾವಣೆ ತರುತ್ತೇವೆ ಎಂದು ಪ್ರಕಾಶ್ ರಾಜ್ ಹೇಳಿದರು.

ರಾಜ್ಯ ರೈತ ಸಂಘಟನೆಯ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಎಸ್‍ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅ.23ರಂದು ನಡೆಯುತ್ತಿರುವ ಹೋರಾಟಕ್ಕೆ ರೈತ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ. ರಾಜ್ಯಾದ್ಯಂತ ಪ್ರಜಾಪ್ರಭುತ್ವದ ಉಳಿವಿಗಾಗಿ ಜನತಾ ಮೆರವಣಿಗೆಗಳನ್ನು ಆಯೋಜಿಸುವುದರ ಜೊತೆಗೆ, ದೇಶದಾದ್ಯಂತ ಎಲ್ಲ ಬೀದಿ-ಬೀದಿಗಳು ಎಲ್ಲ ಜಂತರ್ ಮಂತರ್ ಆಗಲಿವೆ ಎಂದರು.

ಕೇಂದ್ರ ಸರಕಾರವು ಚು.ಆಯೋಗದ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಯುವಜನರ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ, ರಾಷ್ಟ್ರಧ್ವಜ ಹಿಡಿದು ಹೋರಾಟ ನಡೆಸಿದವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ರೈತರ ಹಿತಾಸಕ್ತಿಯನ್ನು ಕಡೆಗಣಿಸಿರುವ ಕೇಂದ್ರ ಸರಕಾರ, ಕೃಷಿ ಕಾಯ್ದೆಗಳ ವಿರುದ್ಧದ ಐತಿಹಾಸಿಕ ಹೋರಾಟದ ಬಳಿಕ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ರಾಜ್ಯದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಿಕ್ಕಟ್ಟಿಗೂ ಕೇಂದ್ರದ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಬಡಗಲಪುರ ನಾಗೇಂದ್ರ ಆರೋಪಿಸಿದರು.

ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರನ್ನು ವಜಾಗೊಳಿಸಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಬೇಕು. ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆಯನ್ನು ಪ್ರಜಾಸತ್ತಾತ್ಮಕಗೊಳಿಸಬೇಕು. ಎಸ್‍ಐಆರ್ ಅನ್ನು ಸಂಪೂರ್ಣ ರದ್ದುಗೊಳಿಸಿ, ಹೊಸ ಚುನಾವಣಾ ಆಯೋಗದ ನೇತೃತ್ವದಲ್ಲಿ ಜನಸ್ನೇಹಿ ರೀತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಬೇಕು. ಎಸ್‍ಐಆರ್ ಬಳಿಕ ನಡೆದಿರುವ ಎಲ್ಲ ಚುನಾವಣೆಗಳನ್ನು ರದ್ದುಗೊಳಿಸಿ ಮರುಚುನಾವಣೆ ನಡೆಸಬೇಕು. ಜಂತರ್ ಮಂತರ್ ನಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಿ, ಯುವಜನರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಟಿ.ಯಶವಂತ್, ಶಿವಪ್ರಕಾಶ್, ಕುಮಾರ್ ಸಮತಳ ಹಾಗೂ ದಲಿತ ಮುಖಂಡರಾದ ಇಂದೂಧರ ಹೊನ್ನಾಪುರ, ಎನ್.ವೆಂಕಟೇಶ್, ವಿ.ನಾಗರಾಜ್, ಬಸವರಾಜ್ ಕೌತಾಳ್, ಕರಿಯಪ್ಪ ಗುಡಿಮನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor