×
Ad

ಎಲ್ಲರೂ ಒಂದಾಗಿ ಕೋಮುವಾದಿಗಳನ್ನು ದಮನಿಸಬೇಕಿದೆ : ಶಾಸಕ ಬಿ.ಆರ್.ಪಾಟೀಲ್

Update: 2026-01-18 23:02 IST

ಬೆಂಗಳೂರು : ಇವತ್ತು ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕೋಮುವಾದಿ ಶಕ್ತಿ ಎಡೆ ಎತ್ತಿದೆ. ದೇಶದಲ್ಲಿ ಮತ್ತೆ ಚಾತುರ್ವರ್ಣ ವ್ಯವಸ್ಥೆ ಮರಳಿ ತರುವ ಪ್ರಯತ್ನ ನಡೆಯುತ್ತಿದೆ. ಅದಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್), ಬಿಜೆಪಿ ಸಜ್ಜಾಗಿ ನಿಂತಿವೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಕೋಮುವಾದಿ ಶಕ್ತಿಯನ್ನು ದಮನಮಾಡಬೇಕು ಎಂದು ಶಾಸಕ ಬಿ.ಆರ್.ಪಾಟೀಲ್ ಕರೆ ನೀಡಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ದಸಂಸ ವತಿಯಿಂದ ಆಯೋಜಿಸಿದ್ದ ‘ಸಮಾನತೆಯ ಹಾದಿಯಲ್ಲಿ ಲಕ್ಷ್ಮೀನಾರಾಯಣ ನಾಗವಾರ’ ಹೋರಾಟಗಾರನ ಅಳಿಯದ ನೆನಪು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆ ತರುವಲ್ಲಿ ದಸಂಸ ತನ್ನದೇ ಆದ ಛಾಪು ಮೂಡಿಸಿದೆ. ಬಸವಣ್ಣನವರನ್ನು ಮೇಲ್ಜಾತಿಯವರು ಮಾತ್ರ ಪೂಜಿಸುತ್ತ, ಅವರ ವಿಚಾರದಲ್ಲಿ ಹೋಗುತ್ತಿದ್ದರು. ಆದರೆ ಬಸವಣ್ಣ ಅವರನ್ನು ಕೇರಿಗೆ ಕರೆದುಕೊಂಡು ಹೋಗಿದ್ದು ದಸಂಸ. ಬಸವಣ್ಣ ಎಂದರೆ ಕೇವಲ ನಂದಿ, ದನ ಎಂದು ಪೂಜಿಸಲಾಗುತ್ತಿದ್ದು, ಬಸವಣ್ಣ ಒಬ್ಬ ಮಾನವತಾವಾದಿ ಎಂದು ದಸಂಸ ತೋರಿಸಿಕೊಟ್ಟಿದೆ ಎಂದು ನುಡಿದರು.

ದಲಿತ ಮುಖಂಡ ಲಕ್ಷ್ಮೀನಾರಾಯಣ ನಾಗವಾರ ಕಾಂಗ್ರೆಸ್‍ಗೆ ಸಕ್ರೀಯವಾಗಿ ಬೆಂಬಲ ನೀಡಿದ್ದರು. ಆದರೆ, ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಲಿಲ್ಲ ಎನ್ನುವ ನೋವು ಅವರಲ್ಲಿತ್ತು. ರಾಜಕೀಯದಲ್ಲಿ ಅವಕಾಶ ಸಿಗಬೇಕಿದ್ದವರಿಗೆ ಸಿಗುವುದಿಲ್ಲ. ಲಕ್ಷ್ಮೀನಾರಾಯಣ ನಾಗವಾರ ಅವರು ಸಮಾನತೆಯ ಕನಸು ಕಾಣುತ್ತಿದ್ದರು. ಅವರ ಕನಸನ್ನು ಕಟ್ಟುವ ಕೆಲಸ ನಮ್ಮ ಮುಂದಿದೆ ಎಂದು ಅವರು ತಿಳಿಸಿದರು.

ಕೆನರಾ ಬ್ಯಾಂಕ್ ಎಸ್‍ಸಿ-ಎಸ್‍ಟಿ ನೌಕರರ ಸಂಘದ ಪುರುಷೋತ್ತಮ ದಾಸ್ ಮಾತನಾಡಿ, ಹುಟ್ಟುತ್ತಾ ನಾವೆಲ್ಲರೂ ಮನುಷ್ಯರು, ಯಾರೋ ಇಟ್ಟ ಲೇಬಲ್‍ಗಳಿಂದ ಬೇರೆ-ಬೇರೆ ಮಾಡಬಾರದು. ಕುವೆಂಪು ಹೇಳಿದಂತೆ ವಿಶ್ವಮಾನವರಾಗಬೇಕಾಗಿರುವುದು ನಮ್ಮ ಕರ್ತವ್ಯ. ಡಾ.ಅಂಬೇಡ್ಕರ್ ಅವರು ಹೇಳಿದಂತೆ ಜಾತಿವಿನಾಶ ಮಾಡಬೇಕು, ಅದಕ್ಕೆ ನಾವು ಪ್ರಯತ್ನಿಸೋಣ ಎಂದು ಹೇಳಿದರು.

ಬೇರೆ ಬೇರೆ ಸಮುದಾಯದವರಿಗೆ ಹಾಸ್ಟೆಲ್, ಕಲ್ಯಾಣ ಮಂಟಪಗಳಿವೆ. ಆದರೆ ದಲಿತರ ಕಲ್ಯಾಣ ಮಂಟಪ ಎಲ್ಲಿದೆ? ನಮಗೆ ಇರುವ ಹಾಸ್ಟೆಲ್‍ಗಳಿಗೆ ಕಿಟಕಿ, ಬಾಗಿಲು ಮುರಿದಿರುತ್ತವೆ. ಅದಕ್ಕಾಗಿ ವಿದ್ಯಾವಂತರಾದವರು ಕೆಲಸ ಮಾಡಬೇಕು. 30 ಎಕರೆ ಜಾಗ ತೆಗೆದುಕೊಂಡು ಕ್ರೀಡಾಂಗಣ ಮಾಡಿ ನಮ್ಮ ಮಕ್ಕಳನ್ನು ಅಂತರ್‍ರಾಷ್ಟ್ರೀಯ, ಒಲಂಪಿಕ್ಸ್‌ ನಲ್ಲಿ ಆಟವಾಡಲು ಅನುಕೂಲ ಮಾಡಬೇಕು ಎಂಬ ಕನಸಿದೆ ಎಂದರು.

ಕಾರ್ಯಕ್ರಮದಲ್ಲಿ ದಸಂಸ ರಾಜ್ಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ದಲಿತ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಜಾನಕಮ್ಮ ಲಕ್ಷ್ಮೀನಾರಾಯಣ ನಾಗವಾರ, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ರಂಗಕರ್ಮಿ ಜನಾರ್ಧನ್(ಜನ್ನಿ), ಸಮಾಜವಾದಿ ಚಿಂತಕ ಅಲಿಬಾಬಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News