×
Ad

ಸಕಲ ಸರಕಾರಿ ಗೌರವದೊಂದಿಗೆ ನೆರವೇರಿದ ಬಿ.ಸರೋಜಾದೇವಿ ಅಂತ್ಯಸಂಸ್ಕಾರ

Update: 2025-07-15 19:16 IST

ಬೆಂಗಳೂರು : ಕನ್ನಡದ ಮೊಟ್ಟ ಮೊದಲ ಸೂಪರ್ ಸ್ಟಾರ್ ನಟಿ ಪ್ರತಿಷ್ಠಿತ ಪದಭೂಷಣ ಪ್ರಶಸ್ತಿ ಪುರಸ್ಕೃತೆ, ಅಭಿನಯ ಸರಸ್ಪತಿ ಬಿ.ಸರೋಜಾದೇವಿ ಅವರು ಪಂಚಭೂತಗಳಲ್ಲಿ ಮಂಗಳವಾರ ಲೀನವಾದರು.

ವಯೋಸಹಜತೆಯಿಂದ ನಿಧನರಾಗಿದ್ದ ಬಿ.ಸರೋಜಾದೇವಿ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಸ್ವಗ್ರಾಮ ದಶವಾರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ನೆರವೇರಿಸಲಾಯಿತು. ಅವರ ಪುತ್ರ ಗೌತಮ್ ಅವರು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

ಸರೋಜದೇವಿಯವರ ಕೊನೆಯಾಸೆಯಂತೆ ಹುಟ್ಟೂರಿನಲ್ಲೇ ನನ್ನ ದೇಹ ಮಣ್ಣಾಗಬೇಕೆಂಬ ಇಚ್ಛೆಯಂತೆ ದಶವಾರದಲ್ಲಿರುವ ಅವರ ತೋಟದ ಮನೆಯಲ್ಲಿ ತಾಯಿ ರುದ್ರಮ್ಮಾ ಅವರ ಸಮಾಧಿ ಪಕ್ಕದಲೇ ಅಂತ್ಯಕ್ರಿಯೆ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿ.ಪಿ.ಯೋಗೇಶ್ವರ್ ಸೇರಿದಂತೆ ಹಲವು ಗಣ್ಯರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.

ಮಂಗಳವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಝಮೀರ್ ಅಹ್ಮದ್ ಖಾನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಅಗಲಿದ ಅಭಿನಯ ಸರಸ್ವತಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಿದರು. ನಂತರ ಅವರ ನಿವಾಸದಿಂದ ವಿಶೇಷ ವಾಹನದಲ್ಲಿ ಮೆರವಣಿಗೆ ಮೂಲಕ ಹುಟ್ಟೂರಿಗೆ ಕೊಂಡಯ್ಯಲಾಯಿತು.

ನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥೀವ ಶರೀರ ಬರುತ್ತಿದ್ದಂತೆ ಅಭಿಮಾನಿಗಳು ಅಂತಿಮ ವಿದಾಯ ಹೇಳಿದರು. ವಾಹನವು ಮೈಸೂರು-ಬೆಂಗಳೂರು ಎಕ್ಸ್‌ ಪ್ರೆಸ್ ವೇನಲ್ಲಿ ಸಂಚರಿಸಿ ರಾಮನಗರ ತಲುಪಿತು. ನಂತರ ಅಲ್ಲಿಂದ ಚನ್ನಪಟ್ಟಣಕ್ಕೆ ಬಂದಾಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಅಲ್ಲಿನ ಸ್ಥಳೀಯರು ಮೇರುನಟಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದ ದೃಶ್ಯ ಕಂಡಿತು.

ನಂತರ ಹುಟ್ಟೂರು ದಶವಾರಕ್ಕೆ ಮಧ್ಯಾಹ್ನದ ವೇಳೆಗೆ ಆಗಮಿಸುತ್ತಿದ್ದಂತೆ ಗಾಂಧಿಭವನದಲ್ಲಿ ಒಂದು ಗಂಟೆ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ನಂತರ ಸಕಲ ಸರಕಾರಿ ಗೌರವಗಳೊಂದಿಗೆ ಮೇರುನಟಿಗೆ ಪೊಲೀಸರು ಗಾಳಿಯಲ್ಲಿ ಮೂರು ಸುತ್ತಿನ ಕುಶಾಲು ತೋಪು ಸಿಡಿಸಿ ಅಂತಿಮ ನಮನ ಸಲ್ಲಿಸಿದರು.

ವಯೋಸಜಹಜ ಕಾಯಿಲೆಯಿಂದ ಬಳಲುತ್ತಿದ್ದ ಬಿ.ಸರೋಜಾದೇವಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿರುವ ಸರೋಜಾದೇವಿ ಅವರು ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.

ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

ಬೆಳಕಾದ ಸರೋಜದೇವಿ..!

ಕನ್ನಡ ಚಿತ್ರರಂಗದ ಹಿರಿಯ ನಟಿ ಬಿ.ಸರೋಜಾದೇವಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದು, ನೇತ್ರ ದಾನ ಮಾಡುವ ಮೂಲಕ ಅಂಧರಿಗೆ ದೃಷ್ಟಿ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ.

ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ನೇತ್ರದಾನ ಮಾಡಿದ್ದರು. ಅದರಂತೆ ವೈದ್ಯರ ತಂಡ ಮಲ್ಲೇಶ್ವರಂನಲ್ಲಿರುವ ಮನೆಗೆ ಆಗಮಿಸಿ ನೇತ್ರದಾನ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದರು.

ಸರೋಜಾದೇವಿ ಹೆಸರು ಶಾಶ್ವತವಾಗಿ ಉಳಿಸಲು ಕ್ರಮ:ಡಿಸಿಎಂ

ಬಿ.ಸರೋಜಾದೇವಿ ಅವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಸರೋಜಾದೇವಿ ಅವರು ನನಗೆ ಸಣ್ಣ ವಯಸ್ಸಿನಿಂದಲೂ ಬಹಳ ಪರಿಚಯ. ನಾನು ಆರಂಭದಲ್ಲಿ ಸಚಿವನಾದಾಗ, ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದರು. ಅವರು ನಮ್ಮ ಜಿಲ್ಲೆಯವರು. ಅವರ ಅಂತಿಮ ಸಂಸ್ಕಾರವನ್ನು ಇಲ್ಲಿ ಮಾಡುತ್ತಿದ್ದೇವೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News