ಮನರೇಗಾ ಯೋಜನೆ ಹೆಸರು, ಸ್ವರೂಪ ಬದಲಾವಣೆ: ಸಚಿವ ಸಂಪುಟ ಖಂಡನೆ
ಬೆಂಗಳೂರು, ಜ.2: ಕೇಂದ್ರ ಸರಕಾರವು ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ) ಯೋಜನೆಯ ಹೆಸರು ಹಾಗೂ ಸ್ವರೂಪ ಬದಲಾವಣೆ ಮಾಡಿದ ಕ್ರಮವನ್ನು ರಾಜ್ಯ ಸಚಿವ ಸಂಪುಟ ಸಭೆ ತೀವ್ರವಾಗಿ ಖಂಡಿಸಿದೆ.
ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.
ಕೇಂದ್ರ ಸರಕಾರವು ಮನರೇಗಾ ಬದಲಾಗಿ ವಿಬಿ-ಜಿ ರಾಮ್ ಜಿ ಯೋಜನೆ ತರುವ ಮೂಲಕ ಸಂವಿಧಾನದ 73ನೇ ತಿದ್ದುಪಡಿ ಅನ್ವಯ, ದೇಶದಲ್ಲಿ ಪಂಚಾಯತ್ ರಾಜ್ಗಳಿಗೆ ಅಧಿಕಾರ ವಿಕೇಂದ್ರೀಕರಣದ ಮೂಲಕ ಅಭಿವೃದ್ಧಿಗೆ ಒತ್ತು ನೀಡಿದ್ದನ್ನು ಬುಡಮೇಲು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಹೇಳಿದರು.
ಯಾವ ಪಂಚಾಯತ್ನಲ್ಲಿ ಯಾವ ಕೆಲಸ ನಡೆಸಬೇಕು ಎಂಬುದನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ. ಹಿಂದಿನ ಯೋಜನೆಯಲ್ಲಿ ಕೇಂದ್ರ ಸರಕಾರ ಶೇ.90 ಹಾಗೂ ರಾಜ್ಯ ಸರಕಾರ ಶೇ.10ರಷ್ಟು ಅನುದಾನವನ್ನು ಕಾಮಗಾರಿಗಳಿಗೆ ನೀಡುತ್ತಿತ್ತು. ಈಗ ಅದರ ಪ್ರಮಾಣವನ್ನು ಕೇಂದ್ರ ಶೇ.60 ಹಾಗೂ ರಾಜ್ಯ ಶೇ.40 ಎಂದು ನಿಗದಿ ಮಾಡಿದ್ದಾರೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವಂತಹ ರೈತರು, ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಗ್ರಾಮೀಣ ಪ್ರದೇಶದಲ್ಲಿ ದನ, ಕರುಗಳ ದೊಡ್ಡಿ, ನಮ್ಮ ಹೊಲ ನಮ್ಮ ದಾರಿ, ಕಣ, ಶಾಲಾ ಕಾಂಪೌಂಡ್ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ ಹಾಗೂ ಗ್ರಾಮಗಳಲ್ಲಿ ಮೈದಾನಗಳನ್ನು ನಿರ್ಮಿಸುವ ಕಾಮಗಾರಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈಗ ಹೊಸ ಕಾನೂನು ಬಂದ ನಂತರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದ ಈ ನಡೆಯು ಗುತ್ತಿಗೆದಾರರಿಗೆ ಅನುಕೂಲ ಮಾಡುವುದರ ಜೊತೆಗೆ, ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣವನ್ನು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗಳಿಗೆ ವಿನಿಯೋಗಿಸುವ ಪ್ರಯತ್ನ ಮಾಡಿದೆ. ಇದರಿಂದಾಗಿ, ಉದ್ಯೋಗದ ಹಕ್ಕನ್ನು ಕಸಿಯಲಾಗಿದೆ. ಈ ಕಾನೂನಿಗೆ ಸಂಬಂಧಿಸಿ ಮುಂದಿನ ನಮ್ಮ ನಿರ್ಣಯಗಳು ಏನಿರಬೇಕು ಎಂಬುದರ ಕುರಿತು ಇಂದು ಮುಖ್ಯಮಂತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಲಿದ್ದಾರೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.