ರಾಜೀವ್ ಗೌಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಲು ಛಲವಾದಿ ನಾರಾಯಣಸ್ವಾಮಿ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ದರ್ಪ ಮತ್ತು ಅಟ್ಟಹಾಸ ಮಿತಿಮೀರಿದೆ. ಶಿಡ್ಲಘಟ್ಟದ ಮುನ್ಸಿಪಲ್ ಕಮೀಷನರ್ ಮತ್ತು ಪೌರಕಾರ್ಮಿಕರನ್ನು ವಾಚಾಮಗೋಚರವಾಗಿ ನಿಂದಿಸಿದ್ದಲ್ಲದೇ, ಬೆಂಕಿ ಹಚ್ಚುವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ತಕ್ಷಣವೇ ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಡ್ಲಘಟ್ಟದ ಬ್ಯಾನರ್ ವಿವಾದ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಶಿಡ್ಲಘಟ್ಟದಲ್ಲಿ ಅಕ್ರಮವಾಗಿ ಬ್ಯಾನರ್ ಅಳವಡಿಸಲು ಅಧಿಕಾರಿಗಳು ಅಡ್ಡಿಪಡಿಸಿದ್ದಕ್ಕೆ ರಾಜೀವ್ ಗೌಡ ಎಂಬುವವರು ಕಮೀಷನರ್ ಅವರನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಪರಿಶಿಷ್ಟ ಜಾತಿಗೆ ಸೇರಿದ ಪೌರಕಾರ್ಮಿಕರನ್ನು ಅಶ್ಲೀಲ ಪದಗಳಿಂದ ನಿಂದಿಸಿ, ಊರು ಬಿಡಿಸುವ ಎಚ್ಚರಿಕೆ ನೀಡಿದ್ದಾರೆ. ಅಧಿಕಾರದಲ್ಲಿದ್ದೇವೆ ಎಂಬ ಕಾರಣಕ್ಕೆ ಇಷ್ಟೊಂದು ಕೆಟ್ಟದಾಗಿ ನಾಲಿಗೆ ಹರಿಬಿಡುವುದು ಸರಿಯೇ? ಎಂದು ಪ್ರಶ್ನಿಸಿದರು.
ದಂಗೆ ಎಬ್ಬಿಸುವ ಮಾತುಗಳನ್ನಾಡಿದಕ್ಕೆ ಹಿಂದೆ ಪೊಲೀಸ್ ಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಆರು ತಿಂಗಳು ಜೈಲಿನಲ್ಲಿ ಇಟ್ಟಿದ್ದಿರಿ. ಈಗ ದಂಗೆ ಎಬ್ಬಿಸುವ ಮತ್ತು ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿರುವ ರಾಜೀವ್ ಗೌಡರನ್ನು ಯಾಕೆ ಬಂಧಿಸಿಲ್ಲ? ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಮುಖ್ಯ ಕಾರ್ಯದರ್ಶಿಗಳು ತಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು," ಎಂದು ಆಗ್ರಹಿಸಿದರು.
ಯಾದಗಿರಿಯ ಕ್ರೀಡಾಪಟು ಹಾಗೂ ಬಿಜೆಪಿಯ ಶಕುಂತಳಾ ನಟರಾಜ್ ಅವರ ಮೇಲೆ ದಾಖಲಿಸಿರುವ ಎಫ್‌ಐಆರ್‌ಗಳನ್ನು ಉಲ್ಲೇಖಿಸಿದ ಅವರು, "ನಮ್ಮ ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ಕ್ರಮ ಕೈಗೊಳ್ಳುವ ಸರ್ಕಾರ, ಬೀದಿಯಲ್ಲಿ ನಿಂತು ಗೂಂಡಾಗಿರಿ ಮಾಡುವವರನ್ನು ಯಾಕೆ ರಕ್ಷಿಸುತ್ತಿದೆ? ಕಮೀಷನರ್ ಮೇಲೆ ನಿಂದನೆ ನಡೆದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಧರಣಿ ಕುಳಿತಿದ್ದು, ಬಿಜೆಪಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯಮಟ್ಟದ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದರು.
ಇದೇ ವೇಳೆ ಬಳ್ಳಾರಿ ಕೊಲೆ ಪ್ರಕರಣದ ಬಗ್ಗೆ ಪ್ರಸ್ತಾಪಿಸಿದ ಅವರು, ಬಳ್ಳಾರಿಯಲ್ಲಿ ಅವರದೇ ಗನ್, ಅವರದೇ ಗನ್‍ಮ್ಯಾನ್, ಅವರದೇ ಗುಂಡು;,ಅವರೇ ಕೊಲೆ ಮಾಡಿ ನಮ್ಮ ಮೇಲೆ ಅದನ್ನು ಹಾಕಲು ಪ್ರಯತ್ನಿಸಲಿಲ್ಲವೇ? ಆ ಕಾರಣದಿಂದ ರಾಜ್ಯದ ಹಿತ ಕಾಪಾಡಬೇಕಾದ ವಿಪಕ್ಷಗಳು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ಕಾಂಗ್ರೆಸ್ ಬೆದರಿಕೆಗಳಿಗೆ ಯಾರೂ ಜಗ್ಗಬೇಕಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರರಾದ ಪ್ರಕಾಶ್ ಹಾಗೂ ಡಾ.ನರೇಂದ್ರ ರಂಗಪ್ಪ ಉಪಸ್ಥಿತರಿದ್ದರು.