ಸಮಸ್ಯೆಗಳ ನಡುವೆಯೂ ಕೃಷಿಕರಿಂದ ಸಾಧನೆ : ಚಲುವರಾಯಸ್ವಾಮಿ
ರಾಷ್ಟ್ರೀಯ ರೈತ ದಿನಚಾರಣೆ ಕಾರ್ಯಕ್ರಮ
ಬೆಂಗಳೂರು : ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆ ಸಹಿತ ಬೇರೆ ಬೇರೆ ಕಾರಣಗಳಿಂದ ಕೃಷಿಕರು ಸಮಸ್ಯೆ ಎದುರಿಸುತ್ತಿದ್ದು, ಇಂತಹ ವ್ಯತ್ಯಾಸಗಳ ನಡುವೆಯೂ ಕೆಲವು ಕೃಷಿಕರು ಯಶ್ವಸಿಯಾಗಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸಮನ್ವಯ ಟ್ರಸ್ಟ್, ಪುಡ್ ಚೈನ್ ಕೃಷಿ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಐಸಿಎಆರ್-ಕೆವಿಕೆ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕೃಷಿಗೆ ಇನ್ನಷ್ಟು ಹೆಚ್ಚು ಒತ್ತು ನೀಡಿದರೆ ಕೃಷಿಕರ ಅಭಿವೃದ್ಧಿಯಾಗುತ್ತದೆ ಎಂದರು.
ರೈತರು ವೈಜ್ಞಾನಿಕ, ಸಾವಯವ, ಸಮಗ್ರ ಹಾಗೂ ಸುಸ್ಥಿರ ಕೃಷಿಯ ಕಡೆಗೆ ಹೆಚ್ಚು ಗಮನಹರಿಸಬೇಕು. ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ಪರಿವರ್ತಿಸಬೇಕು. ಇದಕ್ಕಾಗಿ ರೈತರಿಗೆ ಸರಕಾರ ಹಾಗೂ ಕೃಷಿ ವಿವಿಗಳು ಸದಾ ನೇರವಾಗಲಿವೆ. ರೈತರ ಬದುಕು ಹಸನು ಮಾಡುವುದು ನಮ್ಮ ಹೊಣೆ. ನಾನು ಕೃಷಿ ಸಚಿವನಾದ ನಂತರ ಸಾಕಷ್ಟು ಬದಲಾವಣೆ ತಂದಿದ್ದೇನೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪದ್ಮಶ್ರಿ ವಿಜೇತರಾದ ಹರೇಕಳ ಹಾಜಬ್ಬ, ಅಬ್ದುಲ್ ಖಾದರ್ ನಡಕಟ್ಟಿನ್, ಸತ್ಯನಾರಾಯಣ ಬೇಲೇರಿ, ಅಮೈ ಮಹಾಲಿಂಗ ನಾಯಕ ಹಾಗೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾ.ಹಿತ್ತಲಮನಿ, ಡಾ.ವಿ.ಸಿ.ರಂಗಸ್ವಾಮಿ ಯವರಿಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್, ಸುಮಂಗಲ ಟ್ರಸ್ಟ್‌ನ ಸುಮಲತಾ ಕೆ.ಎಚ್., ಎಫ್‌ಕೆಸಿಸಿಐನ ಉಪಾಧ್ಯಕ್ಷ ಶ್ರೀರಾಮ್ ಪ್ರಸಾದ್, ರೂಪಲತಾ, ಡಾ.ಹಿತ್ತಲಮನಿ ಇತರರು ಭಾಗವಹಿಸಿದ್ದರು.