ಕುಮಾರಸ್ವಾಮಿ ಯಶಸ್ವಿ ನಾಯಕ ಆಗಿದ್ದಾರೆಯೇ?: ಚಲುವರಾಯಸ್ವಾಮಿ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಶಸ್ಸು ಕಂಡಿರುವ ನಾಯಕ. ಅವರ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡುವುದು ಸರಿಯಲ್ಲ. ಆದರೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಶಸ್ವಿ ನಾಯಕ ಆಗಿದ್ದಾರೆಯೇ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ತಾನು ಸಾಂದರ್ಭಿಕ ಶಿಶು ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ಮೈತ್ರಿ ಆಗಿದ್ದು ಅವರ ಸ್ವಂತ ಹಿತಾಸಕ್ತಿಗೆ, ಜನರ ಹಿತಾಸಕ್ತಿಗಲ್ಲ. ಕಾರ್ಯಕರ್ತರ ಹಿತಾಸಕ್ತಿಗೆ ಮೈತ್ರಿ ಮಾಡಿಕೊಂಡಿಲ್ಲ ಎಂದು ಹೇಳಿದರು.
ಮನರೇಗಾ ಕುರಿತು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರಕಾರ ಜನರ ಪರವಾಗಿ ಇಲ್ಲ. ಮೇಲ್ವರ್ಗ, ಕೈಗಾರಿಕಾ ಉದ್ಯಮಿಗಳ ಪರ ಇದ್ದಾರೆ. ಬಿಜೆಪಿ ಆರ್ಥಿಕ ಸಬಲೀಕರಣ ಮಾಡಿಲ್ಲ. ಅದು ಅಲ್ಲದೆ, ಹಳೇ ಮೈಸೂರು ಭಾಗದಲ್ಲಿ ಶೇ.60ರಿಂದ 70ರಷ್ಟು ಜನರು ಕೃಷಿಯನ್ನೆ ನಂಬಿದ್ದಾರೆ. ಒಕ್ಕಲಿಗರು ಸೇರಿ ಬೇರೆ ಸಮುದಾಯದವರು ಕೃಷಿ ಮಾಡುತ್ತಾರೆ. ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗದಿದ್ದರೆ ಬಿಜೆಪಿಯನ್ನೆ ಟೀಕೆ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.