×
Ad

ಅಧಿಕಾರಿಗಳು ಅಹಂ ಭಾವ ಇಲ್ಲದೆ ಕಾರ್ಯನಿರ್ವಹಿಸಬೇಕು : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2025-05-31 20:31 IST

ಬೆಂಗಳೂರು : ಜಿಲ್ಲೆಯ ಅಭಿವೃದ್ಧಿ ಕಾರ್ಯ, ಸರಕಾರದ ಯೋಜನೆಗಳ ಸಮರ್ಪಕ ಅನುಷ್ಠಾನ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜವಾಬ್ದಾರಿ. ಈ ಮೂರು ಅಧಿಕಾರಿಗಳು ಸಮನ್ವಯದಿಂದ, ಯಾವುದೇ ಅಹಂ ಭಾವ ಇಲ್ಲದೆ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಜೊತೆ ಎರಡು ದಿನಗಳ ಕಾಲ ನಡೆಸಿದ ಸಭೆಯನ್ನು ಮುಕ್ತಾಯಗೊಳಿಸಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಮಂತ್ರಿ, ಕಾರ್ಯದರ್ಶಿಗಳೊಂದಿಗೆ ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು. ನಾವು ಏನು ಬದಲಾವಣೆ ತರುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದೇವೆಯೋ ಅದನ್ನು ಜಾರಿಗೊಳಿಸುವುದು ನಿಮ್ಮ ಹೊಣೆ. ನಿಮ್ಮ ಹೆಜ್ಜೆ ಗುರುತು ಜಿಲ್ಲೆಯಲ್ಲಿ ಮೂಡುವಂತಹ ಕಾರ್ಯವನ್ನು ಮಾಡಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಅಂಬೇಡ್ಕರ್ ಹೇಳಿದ ಹಾಗೆ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗುವುದು ಎಲ್ಲರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ, ಇದನ್ನು ಸಾಧ್ಯವಾಗಿಸಬೇಕಾದುದು ನಿಮ್ಮ ಕರ್ತವ್ಯ. ಪ್ರಣಾಳಿಕೆಯಲ್ಲಿನ ನಮ್ಮ 533 ಭರವಸೆಗಳ ಪೈಕಿ 242 ಭರವಸೆಗಳನ್ನು ನಾವು ಈಗಾಗಲೇ ಈಡೇರಿಸಿದ್ದೇವೆ. ಇದರ ಸಮರ್ಪಕ ಅನುಷ್ಠಾನ ನಿಮ್ಮೆಲ್ಲರ ಹೊಣೆಗಾರಿಕೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಾಮಾಜಿಕ ಪಿಡುಗುಗಳನ್ನು ನಿವಾರಿಸಿ: ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳು ಇನ್ನೂ ಹಲವು ಭಾಗಗಳಲ್ಲಿ ಜೀವಂತವಾಗಿದೆ. ಇದೇ ರೀತಿ ಬಾಲ್ಯ ವಿವಾಹದಂತಹ ಪಿಡುಗುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು ಎಂದು ಸೂಚಿಸಿದ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳು ಜನಸಾಮಾನ್ಯರ ಬಗ್ಗೆ ಕೇವಲ ಅನುಕಂಪ ಅಲ್ಲ, ಸಹಾನುಭೂತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪತ್ರಿಕೆಗಳಲ್ಲಿನ ಟೀಕೆ, ವರದಿಗಳಿಗೆ ತಕ್ಷಣ ಸ್ಪಂದಿಸಿ: ಪತ್ರಿಕೆಗಳಲ್ಲಿ ಬರುವ ಟೀಕೆಗಳು, ವರದಿಗಳಿಗೆ ತಕ್ಷಣ ಸ್ಪಂದಿಸಬೇಕು. ಇದರಿಂದ ಜನಸಾಮಾನ್ಯರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ನೀವು ಸರಕಾರ ಮತ್ತು ಜನಸಾಮಾನ್ಯರಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ತಂತ್ರಜ್ಞಾನ ಜನಸಾಮಾನ್ಯರ ಗರಿಷ್ಠ ಹಿತಕ್ಕೆ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News