ಕ್ಯಾನ್ಸರ್ ವಿರುದ್ಧ ಹೋರಾಡಿ ಐಸಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಚಿರಂತನ್ ಹೊನ್ನಾಪುರ
ಬೆಂಗಳೂರು: ಮೂಳೆಯ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಚಿರಂತನ್ ಹೊನ್ನಾಪುರ ಇದೀಗ ಹತ್ತನೇ ತರಗತಿಯ ಐಸಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ಶೇಕಡ 92 ರಷ್ಟು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣನಾಗಿದ್ದಾನೆ.
ನಾಗರಬಾವಿಯ ಆರ್ಯನ್ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಯಾಗಿರುವ ಚಿರಂತನ್ 9ನೇ ತರಗತಿಯಲ್ಲಿ ಓದುತ್ತಿರುವಾಗ ಮೂಳೆಯ ಕ್ಯಾನ್ಸರ್ ಇರುವುದು ಪತ್ತೆಯಾಯ್ತು. ವರ್ಷ ಪೂರ್ತಿ ಶಾಲೆಗೆ ಹೋಗಲಾಗದೆ ಕ್ಯಾನ್ಸರ್ ವಿರುದ್ಧ ಹೋರಾಡಿದ ಈತನ ಬಲಗೈಯ ಕ್ಯಾನ್ಸರ್ ಪೀಡಿತ ಮೂಳೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆದು ಹಾಕಲಾಗಿತ್ತು. ಆದರೆ ರೈಟರ್ ನ ಸಹಾಯದಿಂದ 9ನೇ ತರಗತಿ ಪರೀಕ್ಷೆಯನ್ನು ಎದುರಿಸಿ ಶೇ. 82 ರಷ್ಟು ಅಂಕಗಳನ್ನು ಪಡೆದ.
9ನೇ ತರಗತಿಯ ಫಲಿತಾಂಶದ ನಂತರ ಕೂಡಲೇ 10ನೇ ತರಗತಿಯ ವಿಶೇಷ ತರಗತಿಗಳು ಪ್ರಾರಂಭವಾಗಿದ್ದವು. ಆದರೆ ಕ್ಯಾನ್ಸರ್ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಬೇಕಾಗಿದ್ದ ಕಾರಣ ಸುಮಾರು ಮೂರು ತಿಂಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಯಾವುದೇ ಮನೆ ಪಾಠಕ್ಕೆ ಹೋಗದೆ, ಶಾಲೆಯಲ್ಲಿ ಶಿಕ್ಷಕರ ಪಾಠ, ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಪಡೆದುಕೊಂಡು, ಸಂಪೂರ್ಣ ಪರಿಶ್ರಮದಿಂದ ಓದಿಕೊಂಡ. ಸಾಮಾಜಿಕ ಮಾಧ್ಯಮಗಳ ಚಾನೆಲ್ ಗಳಲ್ಲಿ ಕಾಲಕಾಲಕ್ಕೆ ಬಿತ್ತರಗೊಳ್ಳುತ್ತಿದ್ದ ಲೈವ್ ಪಾಠಗಳನ್ನು ಕೇಳುತ್ತಿದ್ದ.
ಜೀವನ ಹಠಾತ್ತನೆ ಒಡ್ದಿದ್ದ ವೈದ್ಯಕೀಯ ಸವಾಲನ್ನು ಎದೆಗುಂದದೆ, ಚಿಕ್ಕ ವಯಸ್ಸಾದರೂ ಪ್ರಭುದ್ಧತೆಯಿಂದ ಸ್ವೀಕರಿಸಿದ ಚಿರಂತನ್, ಆಶಾವಾದದಿಂದ ಮುನ್ನಡೆದು ಉತ್ತಮ ಅಂಕಗಳನ್ನು ಪಡೆದಿದು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
"ಕಾನೂನು ಪದವಿಯನ್ನು ಪಡೆದು ಮುಂದೆ ಯುಪಿಎಸ್ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗುವ ಆಸೆ ಇದೆ. ಹಾಗಾಗಿ, ಪಿಯುಸಿಯಲ್ಲಿ ಕಾಮರ್ಸ್ ಓದಲು ನಿರ್ಧರಿಸಿದ್ದೇನೆ" ಎನ್ನುತ್ತಾನೆ ಚಿರಂತನ್.