×
Ad

ರಾಜ್ಯದೆಲ್ಲೆಡೆ ಕ್ರಿಸ್ಮಸ್ ಸಂಭ್ರಮ: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

Update: 2025-12-25 23:07 IST

ಬೆಂಗಳೂರು : ರಾಜಧಾನಿ ಬೆಂಗಳೂರು ಸಹಿತ ರಾಜ್ಯದ ಎಲ್ಲೆಡೆ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್‌ಗಳಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗುರುವಾರ ಕ್ರಿಸ್ಮಸ್ ಅಂಗವಾಗಿ ಬೆಂಗಳೂರು ನಗರದ ಚರ್ಚ್‌ಗಳ ಆವರಣ ಮತ್ತು ಹೊರಗಿನ ರಸ್ತೆಗಳು ವಿದ್ಯುತ್ ದೀಪ ಹಾಗೂ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸಿದವು. ಚರ್ಚ್‌ಗಳ ಒಳಗೆ ಸಾಮೂಹಿಕ ಪ್ರಾರ್ಥನೆ ನಡೆದರೆ, ಸುತ್ತಮುತ್ತಲ ಮಾರುಕಟ್ಟೆಗಳಲ್ಲಿ ಕ್ರಿಸ್ಮಸ್‌ಗಾಗಿ ಅಲಂಕಾರಿಕ ವಸ್ತುಗಳು, ಉಡುಗೊರೆಗಳ ಖರೀದಿ ಭರಾಟೆಯಿಂದ ನಡೆದಿತ್ತು.

ಬುಧವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನೆಗಳು ಆರಂಭವಾಗಿದ್ದವು. ಗುರುವಾರ ಮಧ್ಯಾಹ್ನದ ತನಕವೂ ಪ್ರಾರ್ಥನೆಗಳು ನಡೆದವು. ಅದರಲ್ಲೂ ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಫ್ರೇಝರ್‌ಟೌನ್‌ನಲ್ಲಿರುವ ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಯಲ್ಲಿರುವ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್. ಚಾಮರಾಜಪೇಟೆಯ ಸೇಂಟ್ ಜೋಸೆಫ್ಸ್ ಚರ್ಚ್, ಲಿಂಗರಾಜಪುರದ ಹೋಲಿ ಗೋಸ್ಟ್ ಚರ್ಚ್, ಹಲಸೂರಿನ ಹೋಲಿ ಟ್ರಿನಿಟಿ ಚರ್ಚ್, ಎಂ.ಜಿ. ರಸ್ತೆಯ ಈಸ್ಟ್ ಪರೇಡ್ ಚರ್ಚ್, ರಿಚ್ಮಂಡ್ ರಸ್ತೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್, ಸಂಪಂಗಿ ರಾಮನಗರದ ಹಡ್ಸನ್ ಸ್ಮಾರಕ ಚರ್ಚ್ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳು ನಡೆದವು. ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಹಬ್ಬದ ಅಂಗವಾಗಿ ಸಾಂತಾ ಕ್ಲಾಸ್ ವೇಷಧಾರಿಗಳು ಚರ್ಚ್‌ನ ಆವರಣದಲ್ಲಿದ್ದ ಭಕ್ತರಿಗೆ ಬಗೆಬಗೆಯ ಉಡುಗೊರೆಗಳನ್ನು ನೀಡಿದರು. ಉಡುಗೊರೆ ಪಡೆಯಲು ಮಕ್ಕಳು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕ್ರಿಸ್ಮಸ್ ಕೇಕ್ ಹಾಗೂ ಸಿಹಿ ತಿನಿಸುಗಳನ್ನು ಹಂಚಲಾಯಿತು. ಯೇಸು ಹುಟ್ಟಿದ ಸಂದರ್ಭದ ಪ್ರತಿಕೃತಿಗಳು ಹಾಗೂ ಬಾಲ ಯೇಸುವನ್ನು ಮೇರಿ ಮಾತೆ ಎತ್ತಿಕೊಂಡಿರುವ ಮೂರ್ತಿಗಳನ್ನು ಚರ್ಚ್ ಆವರಣದಲ್ಲಿ ಇಡಲಾಗಿತ್ತು.

ಕ್ರಿಸ್ಮಸ್ ಮರಕ್ಕೆ ಉಡುಗೊರೆಗಳನ್ನು ಕಟ್ಟಲಾಗಿತ್ತು. ಚರ್ಚ್ ಗಳಲ್ಲಿ ಬೈಬಲ್ ಪಠಣದ ಜತೆಗೆ ಯೇಸುವಿನ ಮಹಿಮೆಯ ಗೀತೆಗಳನ್ನು ಹಾಡಲಾಯಿತು. ನೃತ್ಯರೂಪಕಗಳು, ಕೆಲವೆಡೆ ಮೇರಿ ಮಾತೆ, ಬಾಲ ಯೇಸುವಿನ ಮೆರವಣಿಗೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು.

ಕ್ರಿಸ್ಮಸ್ ಪ್ರಯುಕ್ತ ಮಾಲ್‌ಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗಿತ್ತು. ಸಂಗೀತ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಶಾಲಾ-ಕಾಲೇಜುಗಳಿಗೆ ರಜೆಗಳಿದ್ದರಿಂದ ಮಾಲ್‌ಗಳಲ್ಲಿ ಜನಜಂಗುಳಿ ಹೆಚ್ಚಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News