ಬೆಂಗಳೂರು : ಕೆಎಂಎಫ್ ವತಿಯಿಂದ ಅಭಿನಂದನೆ ಸಲ್ಲಿಸಲು ಬಂದಿದ್ದ ಪದಾಧಿಕಾರಿಗಳಿಗೆ ಮೊಸರಿನ ಬೆಲೆ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ಸ್ ಬಳಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ಬಣ್ಣಗಳ ಹಾಲಿನ ದರದಲ್ಲಿನ ವ್ಯತ್ಯಾಸದ ಕುರಿತು ಕೇಳಿದ ಪ್ರಶ್ನೆಗೆ, ಕೊಬ್ಬಿನಾಂಶ ಹೆಚ್ಚಿರುವ ಹಾಲಿನ ದರ ಹೆಚ್ಚಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂಪೂರ್ಣ ವಿವರಣೆ ನೀಡಲಿದ್ದಾರೆ ಎಂದು ಹೇಳಿದರು.

ನೀರಿನ ಬಾಟಲಿಯ ಬೆಲೆ ಹೆಚ್ಚಾದಾಗ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅದರಿಂದ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ ಆದಾಯ ಹೋಗುತ್ತದೆ. ಹಾಲಿನ ದರ ಹೆಚ್ಚಳದಿಂದ 11 ಲಕ್ಷ ರೈತ ಕುಟುಂಬಗಳಿಗೆ ನೆರವಾಗಲಿದೆ ಎಂದರು.

ಬಸ್ ದರ ಏರಿಕೆ ಸಾರಿಗೆ ಇಲಾಖೆಯ ನಿರ್ಧಾರ :

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಪ್ರತಿದಿನ ಡೀಸೆಲ್ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ವಿಶೇಷ ಅನುದಾನ ನೀಡಿ ಸಾರಿಗೆ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಬಸ್ ಸಂಚಾರ ಕಡಿಮೆ ಇರುವ ಕಡೆಗಳಲ್ಲಿ ಹೊಸ ಲೆಕ್ಕಾಚಾರದ ಮೂಲಕ ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ. ಬಸ್ ದರ ಏರಿಕೆ ಕುರಿತು ಸಾರಿಗೆ ಇಲಾಖೆಯೇ ನಿರ್ಧಾರ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಗುತ್ತಿಗೆದಾರರಿಗೆ 38 ಸಾವಿರ ಕೋಟಿ ರೂ. ಬಾಕಿ :

ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮೂರು ಬೇಡಿಕೆಗಳನ್ನು ಮುಂದಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಲಾಗಿದ್ದು, ಒಟ್ಟು 38 ಸಾವಿರ ಕೋಟಿ ರೂ. ಬಾಕಿ ಇದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯ ಕೊನೆಯ ಆರು ತಿಂಗಳ ಕಾಮಗಾರಿಗಳ ಬಿಲ್‌ಗಳು ಬಾಕಿ ಉಳಿದಿವೆ. ಈಗ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಗಳೂರಿನಲ್ಲಿ ಲೋಕೋಪಯೋಗಿ ಇಲಾಖೆಯ ಬಿಲ್‌ಗಳನ್ನು ಸರಿಪಡಿಸಲಾಗುತ್ತಿದೆ. ಕಾವೇರಿ ನೀರಾವರಿ ಯೋಜನೆಯ ಕಾಮಗಾರಿಗಳ ಬಾಕಿ ಬಿಲ್‌ಗಳು ಸಾಕಷ್ಟಿವೆ. ಗುತ್ತಿಗೆದಾರರ ಸಂಘದ ಕೆಲವು ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ ಎಂದರು.

ಉಪಚುನಾವಣೆ ಸಿದ್ಧತೆ; ಮಂಗಳವಾರ ಹಿರಿಯೂರಿಗೆ ಪ್ರಯಾಣ :

ಉಪಚುನಾವಣೆಯ ಸಿದ್ಧತೆಗಳ ಕುರಿತು ಕೇಳಿದಾಗ, ಉಪಚುನಾವಣೆಗೆ ಸಿದ್ಧತೆ ಕೈಗೊಳ್ಳುವುದು ತಮ್ಮ ಕರ್ತವ್ಯವಾಗಿದೆ. ಹಿರಿಯೂರಿನಲ್ಲಿ ಸಾಕಷ್ಟು ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಮಂಗಳವಾರ ಅಲ್ಲಿಗೆ ತೆರಳಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

11 ಲಕ್ಷ ರೈತ ಕುಟುಂಬಗಳು, 25 ಲಕ್ಷ ಹಾಲು ಮಾರಾಟಗಾರರಿಗೆ ಅನುಕೂಲ: ಡಿ.ಕೆ. ಸುರೇಶ್

ಇದಕ್ಕೂ ಮುನ್ನ ಸೋಮವಾರ ಮಧ್ಯಾಹ್ನ ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್, ರಾಜ್ಯದಲ್ಲಿ ಪ್ರತಿದಿನ 1.15 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಖಾಸಗಿ ಹಾಲಿನ ಖರೀದಿಯೂ ಹೆಚ್ಚಾಗಿದೆ. ಹಾಲಿನ ದರ ಏರಿಕೆಯಿಂದ 11 ಲಕ್ಷ ರೈತ ಕುಟುಂಬಗಳಲ್ಲದೆ, 25 ಲಕ್ಷ ಹಾಲು ಮಾರಾಟಗಾರರ ಕುಟುಂಬಗಳಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಇತರ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚು :

ತಮಿಳುನಾಡು ಸರ್ಕಾರ ಹಾಲಿನ ದರವನ್ನು 12 ರೂ. ಹೆಚ್ಚಿಸಿದೆ. ನಂದಿನಿ ಉತ್ಪನ್ನಗಳು ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ರಫ್ತಾಗುತ್ತಿವೆ. ಆ ರಾಜ್ಯಗಳಲ್ಲಿ ಹಾಲಿನ ಬೆಲೆ ನಮ್ಮ ರಾಜ್ಯಕ್ಕಿಂತ ಹೆಚ್ಚಾಗಿದೆ. ಹಾಲಿನ ಪುಡಿ ರಾಷ್ಟ್ರೀಯ ಮಾರುಕಟ್ಟೆಯನ್ನು ತಲುಪುತ್ತದೆ. ಅಮೂಲ್ ಕೂಡ ಹಾಲಿನ ದರ ಹೆಚ್ಚಿಸಿದೆ ಎಂದು ಮಾಹಿತಿ ನೀಡಿದರು.

ಹಾಲಿನ ದರ ಏರಿಕೆಯಿಂದ ಬಹುಪಾಲು ರೈತರಿಗೆ ನೆರವಾಗಲಿದೆ. ಒಕ್ಕೂಟಕ್ಕೆ ಪ್ರತಿ ಲೀಟರ್‌ಗೆ ಉಳಿಯುವುದು ಕೇವಲ 60 ಪೈಸೆ ಮಾತ್ರ. ಪ್ರತಿದಿನ 20 ಲಕ್ಷ ಲೀಟರ್ ಹಾಲು ಹೊರರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ನಂದಿನಿ ಹಾಲಿನ ಗುಣಮಟ್ಟಕ್ಕೆ ಅತ್ಯುತ್ತಮ ಎಂಬ ಪ್ರಮಾಣಪತ್ರವೂ ದೊರೆತಿದೆ. ಈ ಕ್ಷೇತ್ರದಲ್ಲಿ ಐದು ಲಕ್ಷ ಯುವಕರಿಗೆ ಉದ್ಯೋಗ ಸೃಷ್ಟಿಯಾಗುವ ಅವಕಾಶವಿದೆ ಎಂದು ಡಿ.ಕೆ. ಸುರೇಶ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor