ಸಿನಿಮಾ ಟಿಕೆಟ್ ದರದ ಮೇಲೆ ಶೇ.2 ಸೆಸ್; ಸಿನಿಪ್ಲೆಕ್ಸ್ ಪ್ರೈ.ಲಿ. ವಿರುದ್ಧ ಬಲವಂತದ ಕ್ರಮ ಬೇಡವೆಂದ ಹೈಕೋರ್ಟ್
ಬೆಂಗಳೂರು : ಚಿತ್ರಮಂದಿರಗಳ ಟಿಕೆಟ್ ಆದಾಯದ ಮೇಲೆ ವಿಧಿಸಲಾಗಿರುವ ಶೇ.2ರ ಸೆಸ್ ಪಾವತಿಸದ ಹಿನ್ನೆಲೆಯಲ್ಲಿ ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಕಾಯ್ದೆ-2024ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಿನಿಪ್ಲೆಕ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ಎಂ.ಜಿ. ನವೀನ್ ಕುಮಾರ್ ಅವರು, ಮಲ್ಟಿಪ್ಲೆಕ್ಸ್‌ಗಳ ಸಿನಿಮಾ ಟಿಕೆಟ್ ಆದಾಯದ ಮೇಲೆ ಶೇ. 2 ಸೆಸ್ ವಿಧಿಸುವ ಕಾಯ್ದೆ ಪ್ರಶ್ನಿಸಲಾಗಿದೆ. ಈಗಾಗಲೇ ಬೇರೆ ಅರ್ಜಿದಾರರಿಗೆ ನ್ಯಾಯಾಲಯ ರಕ್ಷಣೆ ಒದಗಿಸಿದ್ದು, ತಮಗೂ ಅದೇ ರಕ್ಷಣೆ ನೀಡಬೇಕು ಎಂದು ಕೋರಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ದಿನಾಂಕದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿತು.
ಕರ್ನಾಟಕ ಕಾರ್ಮಿಕ ಇಲಾಖೆ, ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ಮಂಡಳಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ನ್ಯಾಯಪೀಠ, ಇದೇ ರೀತಿಯ ಆಕ್ಷೇಪಗಳನ್ನು ಒಳಗೊಂಡಿರುವ ಇತರ ಅರ್ಜಿಗಳ ಜತೆಗೆ ಈ ಅರ್ಜಿಯನ್ನೂ ವಿಚಾರಣೆಗೆ ಪಟ್ಟಿ ಮಾಡುವಂತೆ ಆದೇಶಿಸಿತು. ಅರ್ಜಿಯ ಮುಂದಿನ ವಿಚಾರಣೆ ನ.17ರಂದು ನಡೆಯಲಿದೆ.
ಇದೇ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯಲ್ಲಿ, ಮುಂದಿನ ವಿಚಾರಣೆವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಸರ್ಕಾರದ ಪರವಾಗಿ ಭರವಸೆ ನೀಡಿದ್ದಾರೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಆ್ಯಂಡ್ ಡಿಜಿಟಲ್ ಫೌಂಡೇಷನ್ ಸೇರಿದಂತೆ ಇತರ ಸಂಸ್ಥೆಗಳೂ ಸೆಸ್ ವಿಧಿಸುವ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿವೆ. ಈ ಅರ್ಜಿಗಳಲ್ಲಿಯೂ ರಾಜ್ಯ ಸರ್ಕಾರದ ಬಲವಂತದ ಕ್ರಮಗಳಿಂದ ಮಧ್ಯಂತರ ರಕ್ಷಣೆ ದೊರೆತಿದೆ.