‘ಸ್ಟಿಂಗ್’ ವಿಡಿಯೋದಲ್ಲಿರುವ ಮಹಿಳೆ ಸಿದ್ದರಾಮಯ್ಯ ವಿರುದ್ಧದ ಪಿತೂರಿಯ ಭಾಗ : ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಸಂದರ್ಭದಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದ ಕೇರಳದ ಮಹಿಳೆ, ಅನಂತರ ಹೇಳಿಕೆ ಬದಲಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಒಂದು ವೇಳೆ ಆಕೆ ಹೇಳಿಕೆಯನ್ನು ಬದಲಿಸಿದ್ದರೆ ಅವರನ್ನು ಕರೆತಂದು ಕೋರ್ಟ್ ಮುಂದೆ ಏಕೆ ಹಾಜರುಪಡಿಸಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಸೋಮವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆ ಮಹಿಳೆ ತನ್ನ ಹೇಳಿಕೆಗಳನ್ನು ಬದಲಿಸಿದ್ದರೆ ಅವರು ಈ ಸ್ಟಿಂಗ್ ಪಿತೂರಿಯ ಭಾಗವೇ ಆಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಆರೋಪಿ ಎಂದು ಹೆಸರಿಸಬೇಕಾಗುತ್ತದೆ. ಇದನ್ನು ಪೊಲೀಸರು ಮಾಡಿದ್ದಾರೆಯೇ? ಎಂದು ಕೇಳಿದರು.
‘ಸ್ಟಿಂಗ್’ ಪ್ರಕರಣದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಆ ಪ್ರಕರಣದ ತನಿಖೆಯ ವಿಚಾರಗಳನ್ನು ಪೊಲೀಸ್ ಆಯುಕ್ತರು ಬಹಿರಂಗ ಮಾಡಿದ್ದು, ಆಯುಕ್ತರು ಹೇಳಿಕೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಉಲ್ಲಂಘಿಸಿದಂತೆ ಆಗಿದೆ. ಪೊಲೀಸ್ ಆಯುಕ್ತರು ತಮ್ಮ ಹೇಳಿಕೆಯ ಮೂಲಕ ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ. ಸರಕಾರಕ್ಕೆ ಹೇಗೆ ಬೇಕೋ ಹಾಗೆ ತನಿಖೆ ಮಾಡಿ ತೇಪೆ ಹಚ್ಚಲು ಇವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಪೋಲಿಸರು ಈ ತನಿಖೆಯು ಅಸಲಿ ಸತ್ಯವನ್ನು ಹೊರಗೆಳೆಯುವ ಬದಲಿಗೆ ಸಿದ್ದರಾಮಯ್ಯಗೆ ‘ಕ್ಲೀನ್‍ಚಿಟ್' ನೀಡಿ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ. ಬಹುಶಃ ಅದಕ್ಕೆ ತನಿಖಾ ತಂಡವನ್ನು ರಚಿಸಲಾಗಿದೆ. ಅಷ್ಟೇ ಅಲ್ಲ, ‘ಸ್ಟಿಂಗ್’ ಎನ್ನುವುದು ಕಟ್ಟುಕಥೆ ಎಂದು ಪೊಲೀಸರು ಹೇಳಿದ್ದಾರೆ. ಕಟ್ಟುಕಥೆ ಎಂದಾದ ಮೇಲೆ ಇನ್ನೂ ತನಿಖೆ ಯಾಕೆ ಮಾಡುತ್ತಿದ್ದೀರಿ?. ಯಾರ ವಿರುದ್ಧ ಸಂಚು ಮಾಡಲು ತನಿಖೆ ಮುಂದುವರಿಸಿದ್ದೀರಿ ಎಂದು ಅವರು ಟೀಕಿಸಿದರು.
‘ಕೇರಳಕ್ಕೆ ಹೋಗಿ ಸ್ಟಿಂಗ್ ಮಾಡಿದ್ದು ನಾನೇ. ಐ ಯಾಮ್ ಕಿಂಗ್ ಆಫ್ ಸ್ಟಿಂಗ್, ವೀಡಿಯೋದಲ್ಲಿ ಇರುವ ಧ್ವನಿಯೂ ನನ್ನದೇ’ ಎಂದು ಒಪ್ಪಿಕೊಂಡಿರುವ ವ್ಯಕ್ತಿಯನ್ನು ಇನ್ನೂ ಬಂಧಿಸಿಲ್ಲ ಯಾಕೆ? ರಾಕೇಶ್ ಶೆಟ್ಟಿ, ಕೃಪಾ ಆಳ್ವ ಸೇರಿ ನನ್ನ ವಿರುದ್ಧ ಸ್ಟಿಂಗ್ ಮಾಡಿದ್ದಾರೆಂದು ಹೇಳಿದ್ದಾರೆ. ಅವರ ಪುತ್ರ, ಸಚಿವ ಡಾ.ಯತೀಂದ್ರ ಇದೇ ಹೆಸರುಗಳನ್ನು ಹೇಳಿದ್ದಾರೆ. ಹಾಗಿದ್ದ ಮೇಲೆ ಅವರನ್ನು ಯಾಕೆ ಬಂಧನ ಮಾಡಲಿಲ್ಲ? ಎಂದು ಅವರು ವಾಗ್ದಾಳಿ ನಡೆಸಿದರು.
ಪೊಲೀಸರು ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದ್ದು, ನಮ್ಮ ಪಕ್ಷದ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಕೆಲಸ ಮಾಡುವ ಯುವಕನ ಮನೆಗೆ ಸರ್ಚ್ ಮಾಡಲು ಹೋಗಿದ್ದ ಪೊಲೀಸರು ಮೊಬೈಲ್‍ಗಾಗಿ ಅವರ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಾರೆ. ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ ಎಂದು ಅವರು ಉಲ್ಲೇಖಿಸಿದರು.
ತನಿಖೆ ನೆಪದಲ್ಲಿ ಬೆದರಿಕೆ :
ತನಿಖೆ ನೆಪದಲ್ಲಿ ಪೊಲೀಸರು ನಮ್ಮವರನ್ನು ಬೆದರಿಸುತ್ತಿದ್ದಾರೆ. ಒಂದೇ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿದೆ. ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಹಾಗೂ ಪೊಲೀಸ್ ಆಯುಕ್ತ ನೀಡಿರುವ ಹೇಳಿಕೆಗಳು ಪರಸ್ಪರ ವೈರುಧ್ಯಗಳಿವೆ. ಅಪ್ಲೋಡ್ ಮಾಡಿರುವ ವಿಷಯದ ಬಗ್ಗೆ ಇವರು ತೋರಿಸುತ್ತಿರುವ ಕಾಳಜಿ, ಸ್ಟಿಂಗ್ ಮಾಡಿ ವಿಡಿಯೋ ಮಾಡಿರುವ ಪಿತೂರಿಯ ಬಗ್ಗೆ ತನಿಖೆಯನ್ನು ಮಾಡುತ್ತಿಲ್ಲ ಎಂದು ಅವರು ದೂರಿದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಸಲೀಂ ಅವರೇ ಕಾಲಚಕ್ರ ತಿರುಗುತ್ತದೆ. ಮೇಲೆ ಇದ್ದವರು ಕೆಳಗಡೆ ಬರಬೇಕು, ಕೆಳಗಡೆ ಇರುವವರು ಮೇಲೆ ಹೋಗಲೇಬೇಕು, ಇದು ಪ್ರಕೃತಿ ನಿಯಮ. ಒತ್ತಡಕ್ಕೆ ಮಣಿದು ಕೆಲಸ ಮಾಡಬೇಡಿ. ಮರ್ಜಿಗೆ ಕೆಲಸ ಮಾಡಿದರೆ ಅಪಾಯಕ್ಕೆ ಸಿಲುಕುವುದು ನೀವೇ? ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.