×
Ad

ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆಗೆ ತೀರ್ಮಾನ: ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

Update: 2025-02-23 22:02 IST

ಬೆಂಗಳೂರು : ಕೆಪಿಎಸ್ಸಿ ವತಿಯಿಂದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ಕರವೇ ಕಾರ್ಯಕರ್ತರು ಮತ್ತು ಸಾವಿರಾರು ವಿದ್ಯಾರ್ಥಿಗಳು ಕೆಪಿಎಸ್ಸಿ ಕಚೇರಿಗೆ ಶೀಘ್ರದಲ್ಲೇ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಈ ಕುರಿತು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ ಅವರು, ‘ಫೆ.18ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸಿದ್ದೆವು. ಚಳವಳಿಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಕರವೇ ನಿಯೋಗ ಭೇಟಿ ನೀಡಿ ಕೆಪಿಎಸ್ಸಿಯಿಂದ ಆಗಿರುವ ಅನ್ಯಾಯವನ್ನು ಬಿಡಿಸಿ ಹೇಳಿತ್ತು. ಈ ಸಂದರ್ಭದಲ್ಲಿ ನಮ್ಮ ಚಳವಳಿಗೆ ಸ್ಪಂದಿಸಿದ ಮುಖ್ಯಮಂತ್ರಿ ಎರಡು ದಿನಗಳಲ್ಲಿ ಕೆಪಿಎಸ್‍ಸಿ ಅಧ್ಯಕ್ಷರ ಮತ್ತು ಅಧಿಕಾರಿಗಳನ್ನು ಕರೆಯಿಸಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಸರಕಾರ ಮತ್ತು ಕೆಪಿಎಸ್‍ಸಿ ನಮ್ಮ ಮುಂದಿನ ಹೋರಾಟಗಳ ಆಗುಹೋಗುಗಳಿಗೆ ಜವಾಬ್ದಾರಿ ಹೊರಬೇಕು. ನಾವು ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇದಿಕೆಯ ರಾಜ್ಯ ಮುಖಂಡರು, ಬೆಂಗಳೂರು ನಗರ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಕೆಪಿಎಸ್‍ಸಿ ನಡೆಸಿದ ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡ ಮಾದ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯದ ಹಿನ್ನೆಲೆಯಲ್ಲಿ ಕರವೇ ಸಂಘಟಿಸಿರುವ ಚಳವಳಿಯನ್ನು ತೀವ್ರಗೊಳಿಸುವ ಕುರಿತು ಚರ್ಚೆ ನಡೆಸಲಾಗಿದೆ. ಪ್ರತಿಭಟನೆ ಮಾಡಿ ನಾಲ್ಕು ದಿನಗಳು ಕಳೆದರೂ ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವ ಕುರಿತು ಸ್ವತಃ ಮುಖ್ಯಮಂತ್ರಿಗಳಾಗಲೀ, ಕೆಪಿಎಸ್‍ಸಿಯಾಗಲೇ ಒಂದೇ ಒಂದು ಮಾತು ಹೇಳಿಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಯಾರೂ ಸ್ಪಂದಿಸುವ ಹಾಗೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಶಾಂತಿಯುತ ಹೋರಾಟಕ್ಕೆ ಸರಕಾರ, ಕೆಪಿಎಸ್‍ಸಿ ಸ್ಪಂದಿಸುತ್ತಿಲ್ಲ. ಹೀಗಾಗಿ ನಾವು ಅನಿವಾರ್ಯವಾಗಿ ತೀವ್ರ ಸ್ವರೂಪದ ಹೋರಾಟಕ್ಕೆ ಕೈ ಹಾಕಬೇಕಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News