×
Ad

ಸಿಎಂ, ಡಿಸಿಎಂ ಗುರಿಯಾಗಿಸಿ ಅಪಪ್ರಚಾರ ಮಾಡುವುದೇ ಬಿಜೆಪಿಯ ಕೆಲಸ : ಕಾಂಗ್ರೆಸ್

Update: 2025-02-22 18:44 IST
  • ಸಾಂದರ್ಭಿಕ ಚಿತ್ರ

ಬೆಂಗಳೂರು : ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗುರಿಯಾಗಿಸಿ ಅಪಪ್ರಚಾರ ನಡೆಸುವುದು, ಸುಳ್ಳು ಆರೋಪಗಳನ್ನು ಮಾಡುವುದೇ ಬಿಜೆಪಿಯ ಪೂರ್ಣಾವಧಿ ಕೆಲಸವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ ಅವರು, ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿಸುವ, ಬೆಂಗಳೂರಿಗೆ ಹೊಸ ರೂಪನೀಡುವ ದೂರದೃಷ್ಟಿಯ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿರುವ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಬಿಜೆಪಿಗೆ ಇಲ್ಲ ಎಂದು ತಿಳಿಸಿದೆ.

ಬಿಜೆಪಿ ಅಧಿಕಾರದುದ್ದಕ್ಕೂ ಭ್ರಷ್ಟಾಚಾರ, ಕಮಿಷನ್ ಮಾಫಿಯಾ, ವರ್ಗಾವಣೆ ದಂಧೆ ನಡೆಸಿದ ನಿಮ್ಮ ಕರ್ಮಕಾಂಡಗಳಿಗೆ ರಾಜ್ಯದ ಜನ ತಕ್ಕ ಶಾಸ್ತಿ ಮಾಡಿ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಎಷ್ಟಾದರೂ ಕೋವಿಡ್ ಹೆಣದ ಮೇಲೆ ಹಣ ಲೂಟಿ ಮಾಡಿದ ರಣಹದ್ದುಗಳ ಪರಂಪರೆಯಲ್ಲವೇ ಎಂದು ಹೇಳಿದೆ.

ಹನ್ನೊಂದು ವರ್ಷಗಳಿಂದ ‘ಅಚ್ಛೇ ದಿನ್' ಕಟ್ಟುಕಥೆ ನಂಬಿಕೊಂಡು ಕುಳಿತಿರುವ, ರಾಜ್ಯದ ಜನ ಸಾವು, ನೋವು ಅನುಭವಿಸುತ್ತಿರುವಾಗ 'ದೇವರೇ ಗತಿ' ಎಂದ, ನೀವು ಮಾಡಿಟ್ಟು ಹೋದ ಅದ್ವಾನಗಳನ್ನು ಸರಿಪಡಿಸಿ ಅಭಿವೃದ್ಧಿಯ ಹಳಿಗೆ ತರಲು ಕೆಲವು ಸಮಯ ಹಿಡಿದೇ ಹಿಡಿಯುತ್ತದೆ. ಆ ಹೇಳಿಕೆಯನ್ನೇ ಬೆಟ್ಟ ಮಾಡುವ ನಿಮ್ಮ ಚಿಲ್ಲರೆ ಬುದ್ಧಿ ನೈತಿಕ ಅದಃಪತನದ ಪ್ರತೀಕ ಎಂದು ಕಿಡಿಕಾರಿದೆ.

ಬಿಜೆಪಿ ಸರಕಾರವಿದ್ದಾಗ ಒಂದೂ ಜನಪರ ಯೋಜನೆ ತರದ, ಅಭಿವೃದ್ಧಿ ಕೆಲಸಗಳನ್ನು ಮಾಡದ, ಜನರಿಂದ ತಿರಸ್ಕೃತರಾದ ನಿಮಗೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿಕಾರ್ಯಗಳ ಬಗ್ಗೆ ಅಸೂಯೆ ಅತ್ಯಂತ ಸಹಜ ಎಂದು ತಿಳಿಸಿದೆ.

ಟ್ರಾಫಿಕ್ ದಟ್ಟಣೆ ನಿವಾರಣೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಸಾಕಾರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ 35 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳು, ಸದ್ಯದಲ್ಲೇ ಉತ್ತರ-ದಕ್ಷಿಣ ಕಾರಿಡಾರ್ ಟೆಂಡರ್, 15 ಸಾವಿರ ಕೋಟಿ ವೆಚ್ಚದಲ್ಲಿ 150 ಕಿಮೀ ಫ್ಲೈಓವರ್‍ಗಳು, 5ಸಾವಿರ ರೂ. ಕೋಟಿ ವೆಚ್ಚದ ಡಬಲ್ ಡೆಕ್ಕರ್, 500 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಲೈಟಿಂಗ್‍ಗಳು ಸೇರಿದಂತೆ ಅನೇಕ ಮಹತ್ವಕಾಂಕ್ಷಿ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News