ರೀ ಸರ್ವೇ ಸಂದರ್ಭದಲ್ಲಿ ಗ್ರಾಮ ಠಾಣಾಗಳ ನಿಗದಿ: ಡಿಸಿಎಂ ಡಾ.ಜಿ.ಪರಮೇಶ್ವರ್

'ಜನವಸತಿ ಪ್ರದೇಶದ ಎಲ್ಲಾ ಆಸ್ತಿಗಳಿಗೆ ಹಕ್ಕು ದಾಖಲೆಗಳ ವಿತರಣೆ'

Update: 2026-08-19 15:24 IST

PC: x.com/DrParameshwara

ಬೆಂಗಳೂರು, ಆ.19: ಪ್ರಸಕ್ತ ಚಾಲ್ತಿಯಲ್ಲಿರುವ ರೀ ಸರ್ವೇ ಸಂದರ್ಭದಲ್ಲಿ ಎಲ್ಲಾ ಕೃಷಿ ಜಮೀನನ್ನು ಅಳತೆ ಮಾಡಿ ಉಳಿದ ಜನವಸತಿ ಪ್ರದೇಶಗಳನ್ನು ಗ್ರಾಮ ನಕಾಶೆಗಳಲ್ಲಿ 'ಗ್ರಾಮ ಠಾಣಾ'ಗಳೆಂದು ಗುರುತಿಸಲಾಗಿರುತ್ತದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಅವರು ಇಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಅವರ ರೀ ಸರ್ವೇ ಸಮಯದಲ್ಲಿ ಎಲ್ಲ ಗ್ರಾಮಗಳ ಗ್ರಾಮ ಠಾಣಾಗಳನ್ನು ನಿಗದಿಪಡಿಸಲಾಗಿರುತ್ತದೆಯೇ ಎಂಬ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿ ಮಾತನಾಡುತ್ತಿದ್ದರು.

ರೀ ಸರ್ವೇಯ ನಂತರದಲ್ಲಿ ಬೆಳೆದಿರುವ ಗ್ರಾಮಠಾಣಾಗಳನ್ನು ಸರಕಾರವು ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ/ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ವಾಸದ ಹಕ್ಕುದಾಖಲೆಗಳನ್ನು ನೀಡುವ ಕುರಿತು 2019ರಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ-1961ರ ಕಲಂ 38-ಎ ಅನ್ವಯ 2-ಇ ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳು ಕೆಲವು ಷರತ್ತುಗಳನ್ನು ವಿಧಿಸಿ ಜನವಸತಿ ಪ್ರದೇಶವನ್ನು ಗ್ರಾಮಠಾಣಾವಾಗಿ ಪರಿಗಣಿಸಿ ಅದನ್ನು ಕಂದಾಯ ಗ್ರಾಮ/ಗ್ರಾಮದ ಭಾಗ/ಬಡಾವಣೆ ಆಗಿ ಅಧಿಸೂಚಿಸಲು ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿದೆ. ಅಧಿಸೂಚನೆಯಾದ ನಂತರದಲ್ಲಿ ಸದರಿ ಅಧಿಸೂಚನೆ ಆಧರಿಸಿ ಭೂಮಾಪನ ಇಲಾಖೆಯ ವತಿಯಿಂದ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

2020ರಲ್ಲಿ ಕೇಂದ್ರ ಸರಕಾರದಿಂದ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಡ್ರೋನ್ ಆಧಾರಿತ ಸರ್ವೇ ಮೂಲಕ ಹಕ್ಕುದಾಖಲೆಗಳನ್ನು ಸಿದ್ಧಪಡಿಸಿ ವಿತರಿಸುವ ಸ್ವಮಿತ್ವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಅದರಂತೆ ಜನವಸತಿ ಪ್ರದೇಶದ ಎಲ್ಲಾ ಆಸ್ತಿಗಳಿಗೆ ಹಕ್ಕು ದಾಖಲೆಗಳನ್ನು ಸಿದ್ಧಪಡಿಸಿ ವಿತರಿಸಲಾಗುತ್ತಿದೆ ಎಂದವರು ಮಾಹಿತಿ ನೀಡಿದರು.

ಈಗಾಗಲೇ ಅಳತೆಯಾಗಿ ಸರ್ವೆ ನಂಬರುಗಳನ್ನು ನೀಡಲಾದ ಪ್ರದೇಶವನ್ನು ಗ್ರಾಮಠಾಣಾ ಎಂದು ಪರಿವರ್ತಿಸಲು ಭೂಕಂದಾಯ ಅಧಿನಿಯಮದಲ್ಲಿ ಅವಕಾಶ ಇರುವುದಿಲ್ಲ. ಸರ್ವೆ ನಂಬರುಗಳನ್ನು ನೀಡಲಾದ ಗ್ರಾಮಠಾಣಾಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಮನೆಗಳಿದ್ದರೂ ಅವುಗಳ ಬಳಕೆ ಬದಲಾಗುವುದಿಲ್ಲ. ಗ್ರಾಮಠಾಣಾ ವಿಸ್ತರಣೆ ಮೂಲಕ ಭೂಪರಿವರ್ತನೆಯಾಗದ ಹೊರತು ಭೂಬಳಕೆ ಬದಲಾವಣೆಗೆ ಕಾನೂನಿನ್ವಯ ಯಾವುದೇ ವಿನಾಯಿತಿ ದೊರೆಯುವುದಿಲ್ಲ ಎಂದು ತಿಳಿಸಿದರು.

ಗ್ರಾಮಠಾಣಾಗಳನ್ನು ಎಷ್ಟು ವರ್ಷಗಳಿಗೊಮ್ಮೆ ನಿಗದಿಪಡಿಸಬೇಕು ಎಂಬ ನಿರ್ದಿಷ್ಟ ಕಾಲಾವಧಿಯನ್ನು ಕರ್ನಾಟಕ ಭೂಕಂದಾಯ ಅಧಿನಿಯಮ, ನಿಯಮಗಳು ಅಥವಾ ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಿರುವುದಿಲ್ಲ. ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 115ರನ್ವಯ ಸರ್ವೇ ಗ್ಯಾರಂಟಿ ಅವಧಿ 30 ವರ್ಷವಾಗಿದ್ದು, ಪ್ರತಿ ಸರ್ವೇ ಸೆಟಲ್ಕೆಂಟ್ ಕಾರ್ಯ ಪೂರ್ಣಗೊಂಡ ನಂತರ ಅದರಂತೆ, ಗ್ರಾಮ ನಕಾಶೆಯನ್ನು ಕಾಲೋಚಿತಗೊಳಿಸಬೇಕಾಗಿರುತ್ತದೆ. ಮರು ಭೂಮಾಪನ ಕಾರ್ಯವು ಕೈಗೊಳ್ಳದೇ ಇದ್ದಲ್ಲಿ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ ಕಲಂ 126 ರನ್ವಯ ಈ ಹಿಂದಿನ ಸೆಟಲ್ಮೆಂಟ್ ಜಾರಿಯಲ್ಲಿರುತ್ತದೆ ಎಂದರು.

ಗ್ರಾಮ ನಕಾಶೆಗಳನ್ನು ನಿರ್ದಿಷ್ಟ ಸಂಖ್ಯೆಯ ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಇಂಡೀಕರಿಸಬೇಕೆಂಬ ಬಗ್ಗೆ ಯಾವುದೇ ಕಾಲಮಿತಿ ನಿಗದಿಪಡಿಸಿರುವುದಿಲ್ಲ. ಗ್ರಾಮ ನಕಾಶೆಗಳನ್ನು ಪ್ರತಿ ರೀ ಸರ್ವೇ /ಸರ್ವೇ ಸೆಟಲ್ಮೆಂಟ್ ಕಾರ್ಯ ಪೂರ್ಣಗೊಂಡ ನಂತರ ಕಾಲೋಚಿತಗೊಳಿಸಲಾಗುತ್ತದೆ. ಸರ್ವೆ, ರೀ ಸರ್ವೇ / ರಿ-ಕ್ಲಾಸಿಫಿಕೆಶನ್ ಕಾಲಕ್ಕೆ, ಗಡಿ ಬದಲಾವಣೆ ಹಾಗೂ ಇತರೆ ದಾಖಲೆಗಳ ಆಧಾರದ ಮೇಲೆ ನಕಾಶೆಗಳನ್ನು ಪರಿಷ್ಕರಿಸುವ ವ್ಯವಸ್ಥೆ ಜಾರಿಯಲ್ಲಿರುತ್ತದೆ. ಪ್ರಸಕ್ತ ರಾಜ್ಯದಲ್ಲಿ ರೀ ಸರ್ವೇ / ರಿ-ಕ್ಲಾಸಿಫಿಕೆಶನ್ ಅವಧಿಯಲ್ಲಿ ಕಾಲೋಚಿತಗೊಳಿಸಲ್ಪಟ್ಟ ನಕಾಶೆಗಳು ಚಾಲ್ತಿಯಲ್ಲಿದ್ದು, ಅಧೀನ ಕಚೇರಿಗಳಿಂದ ಸೂಕ್ತ ಪ್ರಸ್ತಾವ ಸ್ವೀಕೃತವಾದಲ್ಲಿ ಪರಿಶೀಲಿಸಿ ಕಾಲೋಚಿತ ಗ್ರಾಮ ನಕಾಶೆಗಳನ್ನು ಮರು ಮುದ್ರಿಸಿಕೊಡಲಾಗುತ್ತದೆ ಎಂದು ತಿಳಿಸಿದರು.

ಸರ್ವೇ ಗ್ಯಾರಂಟಿ ಅವಧಿಯ 30 ವರ್ಷ ಮುಕ್ತಾಯವಾದ ತರುವಾಯ, ಭೂಮಿಯ ಮೇಲೆ ಆಗಿರುವ ಎಲ್ಲಾ ಭೌಗೋಳಿಕ ಬದಲಾವಣೆಗಳನ್ನೊಳಗೊಡಂತೆ ರಾಜ್ಯದ ಎಲ್ಲಾ ಗ್ರಾಮಗಳನ್ನು ಮರು ಭೂಮಾಪನಕ್ಕೊಳಪಡದೇ ಇರುವುದರಿಂದ ನಕಾಶೆಯಲ್ಲಿ ಕಾಲೋಚಿತಗೊಳಿಸಲು ಸಾಧ್ಯವಾಗುತ್ತಿರುವುದಿಲ್ಲ. ಈ ಬಗ್ಗೆ ಕೇಂದ್ರ ಸರಕಾರದ ಸಹಭಾಗಿತ್ವದ ಪ್ರಮುಖ ಯೋಜನೆಯಾದ ಸ್ವಮಿತ್ವ ಯೋಜನೆ ಮೂಲಕ ರಾಜ್ಯದ ಪ್ರತಿ ಗ್ರಾಮ ಠಾಣಾ ಆಸ್ತಿಗಳನ್ನು ಆಧುನಿಕ ಉಪಕರಣ ಬಳಸಿ, ಕಂದಾಯ ಇಲಾಖೆ/ಪಂಚಾಯತ್ ರಾಜ್ ಇಲಾಖೆ ಸಹಕಾರದೊಂದಿಗೆ ಕಾಲೋಚಿತಗೊಳಿಸುವ ಕಾರ್ಯ ಚಾಲ್ತಿಯಲ್ಲಿದೆ. ಹಂತ ಹಂತವಾಗಿ ಎಲ್ಲಾ ಗ್ರಾಮ ಠಾಣಾ ಆಸ್ತಿಗಳ ಸರ್ವೇ/ಕಾಲೋಚಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತದೆ. ಅದರಂತೆ ಸ್ವಮಿತ್ವ ಯೋಜನೆಯಡಿ ರಾಜ್ಯದಲ್ಲಿ ಗ್ರಾಮಠಾಣಾ ಆಸ್ತಿಗಳ ಅಳತೆ ಮತ್ತು ನಕ್ಷೆ ತಯಾರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದರು.

ಗ್ರಾಮ ನಕಾಶೆಗಳ ಮುದ್ರಣ ಪ್ರತಿಗಳನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕೋರಿಕೆ ಮೇರೆಗೆ ಸಾರ್ವಜನಿಕರಿಗೆ ವಿತರಿಸಲಾಗುತ್ತಿದ್ದು, 5 ಪ್ರತಿಗಳಿಗಿಂತ ಕಮ್ಮಿ ಆದಂತಹ ಗ್ರಾಮದ ಗ್ರಾಮ ನಕಾಶೆಯಲ್ಲಿನ ಎಲ್ಲಾ ಬದಲಾವಣೆಗಳನ್ನು ಇಂಡೀಕರಿಸಿ ಕಚ್ಚಾ ನಕಾಶೆ ತಯಾರಿಸಿ ಮರು ಮುದ್ರಣಕ್ಕಾಗಿ ಸಲ್ಲಿಸುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News