ಮೋದಿ ಸರಕಾರ ಕೇವಲ ಹೆಸರು ಬದಲಾವಣೆ ಮಾಡುವ ಸರಕಾರ : ಡಾ.ಆನಂದ್ ಕುಮಾರ್
ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರ ಕಾರ್ಯಕಾರಣಿ; ರಾಷ್ಟ್ರೀಯ ಸಲಹಾ ಮಂಡಳಿ ಸಭೆ
ಬೆಂಗಳೂರು : ಕಾಂಗ್ರೆಸ್ ಸರಕಾರದ ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಹೆಸರು ಬದಲಾಯಿಸಿ ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಮಹತ್ವಕಾಂಕ್ಷಿಗಳಿಗೆ ತಿಲಾಂಜಲಿ ಇಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಬದಲಾಯಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರು ಹಾಗೂ ಮಹಾರಾಷ್ಟ್ರ ಉಸ್ತುವಾರಿ ಡಾ.ಆನಂದ್ ಕುಮಾರ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಎರಡು ದಿನಗಳ ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕರ ಕಾರ್ಯಕಾರಣಿ ಮತ್ತು ರಾಷ್ಟ್ರೀಯ ಸಲಹಾ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಸರಕಾರ ಕೇವಲ ಹೆಸರು ಬದಲಾವಣೆ ಮಾಡುವ ಸರಕಾರವಾಗಿದ್ದು, ಬಡವರು, ಶೋಷಿತರು ದಲಿತರಿಗೆ ಅನ್ಯಾಯ ಮಾಡುತ್ತಿದೆ. ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕ ಅಸಮಾನತೆಗಳಿಂದ ಜನ ಜೀವನ ಬಾಧಿತವಾಗಿದೆ. ಮತಗಳ್ಳತನದ ಮೂಲಕ ಅಧಿಕಾರ ಹಿಡಿದು ಮನಬಂದಂತೆ ಆಡಳಿತ ನಡೆಸಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸರಕಾರಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.
ಆರೆಸ್ಸೆಸ್ ಪ್ರೇರಿತ ನೀತಿಗಳಿಂದ ಮೀಸಲಾತಿಯಲ್ಲಿ ದಲಿತರಿಗೆ ನೇಮಕಾತಿ, ಬಡ್ತಿಯಲ್ಲಿ ಅನ್ಯಾಯವಾಗುತ್ತಿದೆ. ಉಕ್ಕಿನ ಮಹಿಳೆ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮದಿಂದ ಪ್ರೇರಿತರಾಗಿ ಕೋಟ್ಯಂತರ ಯುವ ಸಮೂಹ ಕಾಂಗ್ರೆಸ್ ಸೇರಿ ದೇಶದ ಅಭಿವೃದ್ಧಿ ಯಾನದಲ್ಲಿ ಭಾಗಿಯಾಗಿದೆ. ಈ ಕಾರ್ಯಕ್ರಮಗಳಿಂದ ದೇಶದ ರಕ್ಷಣೆ, ಆರ್ಥಿಕ ಸ್ಥಿರತೆ, ಸಾಮಾಜಿಕ ನ್ಯಾಯ ದೊರೆಯುತ್ತಿದ್ದು, ಈ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜೀವ್ ಗಾಂಧಿ ಕೊಡುಗೆ ಅನನ್ಯ. ದೇಶದ ಆರ್ಥಿಕ ಸದೃಢತೆಯಲ್ಲಿ ಡಾ. ಮನಮೋಹನ್ ಸಿಂಗ್ ಪಾತ್ರ ಅಪಾರ. ಗಾಂಧಿ, ನೆಹರು ಪರಂಪರೆ, ಸೋನಿಯಾ ಗಾಂಧಿ ಅವರ ತ್ಯಾಗ, ಜನಪರ ಸೇವೆ ಜನಜನಿತವಾಗುವಂತೆ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದರು.
ಇತ್ತೀಚೆಗೆ ಸೈಬರ್ ವಂಚನೆಗಳು ಹೆಚ್ಚಾಗುತ್ತಿದ್ದು, ಸಹಸ್ರಾರು ಕೋಟಿ ಲೂಟಿಯಾಗುತ್ತಿದೆ. ಈ ಡಿಜಿಟಲ್ ಇಂಡಿಯಾ ಮಾಫಿಯಾ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ. ಡಿಜಿಟಲೀಕರಣ ಮಾಡುವ ಮುನ್ನ ಪೂರ್ವ ತಯಾರಿ ಮಾಡಿಕೊಂಡಿಲ್ಲ. ಇದರಿಂದ ಮುಗ್ಧ ಜನರ ಹಣವನ್ನು ಡಿಜಿಟಲ್ ವಂಚಕರ ಗುಂಪುಗಳು ಕೊಳ್ಳೆ ಹೊಡೆಯುತ್ತಿದೆ. ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ್ದರೂ ಮೋದಿ ಸರಕಾರ ಜನ ಸಾಮಾನ್ಯರ ರಕ್ಷಣೆಗೆ ಬಂದಿಲ್ಲ. ಅನಾಹುತಗಳ ಬಗ್ಗೆ ಮುಂಜಾಗ್ರತೆ ವಹಿಸಿಲ್ಲ. ಬೀಗವನ್ನು ತಯಾರಿಸುವ ಮುನ್ನ, ಬೀಗದ ಕೈಯನ್ನು ತಯಾರಿಸಬೇಕೆನ್ನುವ ಸಾಮಾನ್ಯ ಜ್ಞಾನ ಮೋದಿ ಅವರಿಗಿಲ್ಲದಂತಾಗಿದೆ ಎಂದು ಟೀಕಿಸಿದರು.
ದಲಿತರ ಜೀವನ ಮತ್ತು ಪ್ರಗತಿಯನ್ನು ಕುಂಠಿತಗೊಳಿಸುವ ಸಮಸ್ಯೆಗಳು ಇಂದಿಗೂ ಹಲವು ರೂಪಗಳಲ್ಲಿ ಎದುರಾಗುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಹೋರಾಟ ಮಾಡುವುದು ನಮ್ಮ ಪಕ್ಷದ ಧರ್ಮವೂ ಆಗಿದೆ. ದಲಿತರಿಗೆ ರಾಜಕೀಯ ಪ್ರಾತಿನಿಧ್ಯೆ ಹೆಚ್ಚಿಸುವ ಅಗತ್ಯವಿದೆ. ಮೀಸಲಾತಿಯಿಂದ ರಾಜಕೀಯ ಸ್ಥಾನಮಾನ ದೊರೆತರೂ, ಮುಂಚೂಣಿ ನಾಯಕತ್ವಕ್ಕೆ ದಲಿತರು ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಪಕ್ಷ ಮತ್ತು ಸರಕಾರದಲ್ಲಿ ದಲಿತ ಸಮುದಾಯಕ್ಕೆ ಉನ್ನತ ಹುದ್ದೆಗಳು ದೊರೆಯುತ್ತಿರುವುದು ಶ್ಲಾಘನೀಯ. ಎಸ್ಸಿ, ಎಸ್ಟಿ ದೌರ್ಜನ್ಯ ಕಾಯಿದೆ ಇದ್ದರೂ, ಹಲವಾರು ಪ್ರಕರಣಗಳಲ್ಲಿ ದೂರು ದಾಖಲಿಸದೇ ಇರುವ ಘಟನೆಗಳು ಸಾಮಾನ್ಯ. ಕಾನೂನು ಜಾರಿಯಲ್ಲಿ ವಿಳಂಬ, ಸಾಕ್ಷ್ಯಗಳ ಕೊರತೆ, ತನಿಖೆಯಲ್ಲಿ ನಿರ್ಲಕ್ಷ್ಯ—ಇವುಗಳು ನ್ಯಾಯದಾನಕ್ಕೆ ದೊಡ್ಡ ಅಡ್ಡಿಯಾಗಿವೆ. ದಲಿತರದ್ದು ಕೇವಲ ಒಂದು ವರ್ಗದ ಸಮಸ್ಯೆಗಳಲ್ಲ; ಅವು ಭಾರತದ ಸಾಮಾಜಿಕ ನ್ಯಾಯದ ಪರೀಕ್ಷೆಯೂ ಆಗಿದೆ ಎಂದು ಹೇಳಿದರು.
ಶಿಕ್ಷಣ ದಲಿತರ ಸಬಲೀಕರಣದ ಮುಖ್ಯ ಆಯುಧ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶಾಲಾ ಮೂಲ ಸೌಕರ್ಯಗಳ ಕೊರತೆ, ಹಣಕಾಸು, ಸಾಮಾಜಿಕ ಹಿಂಸೆಗಳು ದಲಿತರ ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಉನ್ನತ ವಿದ್ಯಾಭ್ಯಾಸಕ್ಕೆ ಅವಕಾಶಗಳು ಇದ್ದರೂ, ಮಾರ್ಗದರ್ಶನದ ಕೊರತೆ ಇದೆ. ಆರ್ಥಿಕ ಬಿಕ್ಕಟ್ಟು ಮತ್ತು ಜಾತಿ ಅಡೆತಡೆಗಳು ಅನೇಕ ಪ್ರತಿಭೆಗಳನ್ನು ಬೆಳಗುವುದನ್ನು ನಿಯಂತ್ರಿಸುವಂತಾಗಿದೆ. ಪಂಡಿತ್ ಜವಾಹರಲಾಲ್ ನೆಹರು ಅವರಿಗೆ ಬಾಲ್ಯದಲ್ಲಿಯೇ ದೇಶಪ್ರೇಮ ಎಂಬುದು ನರನಾಡಿಗಳಲ್ಲಿ ಹಾಸು ಹೊಕ್ಕಾಗಿತ್ತು. ಬ್ರಿಟಿಷರ ವಿರುದ್ಧ ಸಮರ್ಥವಾಗಿ ಹೋರಾಟ ಮಾಡಿದ ಮುತ್ಸದ್ದಿ ಎಂದು ಡಾ. ಆನಂದ್ ಕುಮಾರ್ ಹೇಳಿದರು.