Bengaluru | ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ಉದ್ಯಮಿಗೆ 8.3 ಕೋಟಿ ರೂ. ವಂಚನೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವುದಾಗಿ ನಂಬಿಸಿ ನಗರದ ಉದ್ಯಮಿಯೊಬ್ಬರಿಗೆ ಸುಮಾರು 8.3 ಕೋಟಿ ರೂ.ಗಳನ್ನು ಸೈಬರ್ ಕಳ್ಳರು ವಂಚಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ದಕ್ಷಿಣ ವಿಭಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಉದ್ಯಮಿ ರಾಜೇಂದ್ರ ನಾಯ್ಡು ಅವರಿಗೆ ಷೇರು ಮಾರುಕಟ್ಟೆ ಹೆಸರಿನಲ್ಲಿ ವಂಚಿಸಲಾಗಿದ್ದು, ದಕ್ಷಿಣ ವಿಭಗದ ಸಿಇಎನ್ ಠಾಣೆಗೆ ಅವರು ದೂರು ನೀಡಿದ್ದಾರೆ. ರಾಜೇಂದ್ರ ನಾಯ್ಡು ಅವರಿಗೆ ಕರೆ ಮಾಡಿದ್ದ ವಂಚಕರು, ಅವರು ಈ ಹಿಂದೆ ಪಡೆದಿದ್ದ ಸಾಲದ ಕುರಿತು ಮಾತನಾಡುತ್ತಾ ‘ನಿಮ್ಮ ಸಿವಿಲ್ ಸ್ರ್ಕೋರ್ ಉತ್ತಮವಾಗಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶಗಳಿಸಬಹುದು’ ಎಂದು ನಂಬಿಸಿದ್ದರು ಎನ್ನಲಾಗಿದೆ.
ಕೆಲವು ಚಾರಿಟಿ ಸೇವೆಗಳನ್ನು ನಡೆಸುತ್ತಿದ್ದ ರಾಜೇಂದ್ರ ನಾಯ್ಡು ಅವರು ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅದರಿಂದ ಬರುವ ಹಣವನ್ನು ಚಾರಿಟಿಗೆ ಉಪಯೋಗಿಸಬಹುದು ಎಂದು ಭಾವಿಸಿ ಹೂಡಿಕೆ ಮಾಡಲು ಮುಂದಾಗಿದ್ದರು. ಬಳಿಕ ರಾಜೇಂದ್ರ ನಾಯ್ಡು ಅವರ ಮೊಬೈಲ್ ಫೋನ್‍ನಲ್ಲಿ ವಂಚಕರು ಆ್ಯಪ್‍ವೊಂದನ್ನು ಇನ್‌ಸ್ಟಾಲ್ ಮಾಡಿಸಿದ್ದರು ಎನ್ನಲಾಗಿದೆ.
ಆರಂಭದಲ್ಲಿ 25 ಲಕ್ಷ ರೂ. ಹೂಡಿಕೆ ಮಾಡಿದ್ದ ನಾಯ್ಡು ನಂತರ ಹಂತಹಂತವಾಗಿ ಒಟ್ಟು 8.3 ಕೋಟಿ ರೂ. ಹಣ ವರ್ಗಾಯಿಸಿದ್ದರು. ಇದಕ್ಕೆ ಪೂರಕವೆಂಬಂತೆ ಆ್ಯಪ್‍ನಲ್ಲಿ 59.4 ಕೋಟಿ ರೂ. ಲಾಭಾಂಶವನ್ನು ಆರೋಪಿಗಳು ತೋರಿಸಿದ್ದರು ಎಂದು ರಾಜೇಂದ್ರ ನಾಯ್ಡು ಪೊಲೀಸರಿಗೆ ತಿಳಿಸಿದ್ದಾರೆ.
ತಮ್ಮ ಹೂಡಿಕೆಯು ದೊಡ್ಡ ಮೊತ್ತದ ಲಾಭಗಳಿಸಿದೆ ಎಂದುಕೊಂಡಿದ್ದ ರಾಜೇಂದ್ರ ನಾಯ್ಡು, 15 ಕೋಟಿ ರೂ.ಗಳನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಆದರೆ ಹಣ ವಿತ್ ಡ್ರಾ ಆಗದಿದ್ದಾಗ ಅನುಮಾನಗೊಂಡ ಅವರು, ಮೊದಲು ತಮ್ಮನ್ನು ಸಂಪರ್ಕಿಸಿದ್ದ ಅಪರಿಚಿತ ವಂಚಕರಿಗೆ ಕರೆ ಮಾಡಿ ವಿಚಾರಿಸಿದಾಗ, ಶೇ.18 ಸೇವಾ ಶುಲ್ಕವಾಗಿ ಸುಮಾರು 2.70 ಕೋಟಿ ರೂ. ಪಾವತಿಸಬೇಕು ಎಂದು ಆಗ್ರಹಿಸಿದ್ದರು. ಆ ಸಮಯದಲ್ಲಿ ತಾವು ವಂಚನೆಗೊಳಗಾಗಿರುವುದನ್ನು ಅರಿತ ನಾಯ್ಡು ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು.
ನಂತರ ದಕ್ಷಿಣ ವಿಭಗದ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ಲಿಖಿಯ ದೂರು ನೀಡದ್ದಾರೆ. ಸದ್ಯ ದಕ್ಷಿಣ ವಿಭಗ ಸಿಇಎನ್ ಪೊಲೀಸರು ವಂಚಕರ ಖಾತೆಯಲ್ಲಿದ್ದ ಸುಮಾರು 60 ಲಕ್ಷ ಹಣವನ್ನು ಫ್ರೀಜ್ ಮಾಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.