×
Ad

ಬೆಂಗಳೂರಿನ ಸರಕಾರಿ ಮೌಲಾನಾ ಆಝಾದ್ ಮಾದರಿ ಶಾಲೆಗಳಲ್ಲಿ ಅವ್ಯವಸ್ಥೆ: ಅಧ್ಯಯನ ವರದಿಯಲ್ಲಿ ಬಹಿರಂಗ

Update: 2025-12-16 16:15 IST

ಬೆಂಗಳೂರು: ಮೂವ್‌ಮೆಂಟ್ ಫಾರ್ ಜಸ್ಟೀಸ್ ನಡೆಸಿದ ಸಮಗ್ರ ತಳಮಟ್ಟದ ಅಧ್ಯಯನವು ಬೇಂಗಳೂರಿನಲ್ಲಿಯ ಸರಕಾರಿ ಮೌಲಾನಾ ಆಝಾದ್ ಮಾದರಿ ಆಂಗ್ಲಮಾಧ್ಯಮ ಶಾಲೆಗಳ (ಎಂಎಎಂಎಸ್) ಕಾರ್ಯ ನಿರ್ವಹಣೆಯಲ್ಲಿ ತೀವ್ರ ರಚನಾತ್ಮಕ, ಆಡಳಿತಾತ್ಮಕ ಮತ್ತು ಶೈಕ್ಷಣಿಕ ನ್ಯೂನತೆಗಳನ್ನು ಬಹಿರಂಗಗೊಳಿಸಿದೆ.

‘ಬೆಂಗಳೂರಿನಲ್ಲಿಯ ಮೌಲಾನಾ ಆಝಾದ್ ಮಾದರಿ ಶಾಲೆಗಳ ಸ್ಥಿತಿ ಕುರಿತು ಅಧ್ಯಯನ’ ವರದಿಯು ಎಂಎಎಂಎಸ್ ಶಾಲೆಗಳಲ್ಲಿನ ಮೂಲಸೌಕರ್ಯ, ಆಡಳಿತ, ದಾಖಲಾತಿ ಮಾದರಿಗಳು, ಶಿಕ್ಷಕರ ಲಭ್ಯತೆ ಮತ್ತು ಕಲಿಕೆಯ ಫಲಿತಾಂಶಗಳನ್ನು ಪರಿಶೀಲಿಸಿದ್ದು, ನೀತಿ ಭರವಸೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವಿನ ಅಂತರವು ವ್ಯಾಪಕವಾಗಿದೆ ಮತ್ತು ದೊಡ್ಡದಾಗುತ್ತಿದೆ ಎಂಬ ನಿರ್ಧಾರಕ್ಕೆ ಬಂದಿದೆ.

ನ್ಯೂನತೆಗಳನ್ನು ನಿವಾರಿಸಲು ತುರ್ತು ಕ್ರಮವನ್ನು ತೆಗೆದುಕೊಳ್ಳದಿದ್ದರೆ ಈ ಅಲ್ಪಸಂಖ್ಯಾತ ಶಾಲೆಗಳ ಮೂಲ ಉದ್ದೇಶವೇ ಸಂಪೂರ್ಣವಾಗಿ ದುರ್ಬಲಗೊಳ್ಳಬಹುದು ಎಂದು ವರದಿಯು ಎಚ್ಚರಿಸಿದೆ.

ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು 2017ರಲ್ಲಿ ಆರಂಭಿಸಿದ ಈ ಶಾಲೆಗಳಿಗೆ ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಅವರ ಹೆಸರನ್ನಿಡಲಾಗಿದೆ.

ಈ ಶಾಲೆಗಳನ್ನು ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯಡಿ 6ರಿಂದ 10ನೇ ತರಗತಿಗಳಿಗಾಗಿ ಆಂಗ್ಲ ಮಾಧ್ಯಮ ಸರಕಾರಿ ಶಾಲೆಗಳು ಎಂದು ಕರೆಯಲಾಗುತ್ತಿದೆ. ಈ ಉಪಕ್ರಮವು ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಿದ್ಯಾರ್ಥಿಗಳು ಉಚಿತ ಸಮವಸ್ತ್ರ, ಹಾಜರಾತಿ ಮತ್ತು ಪೋಷಣೆಯನ್ನು ಹೆಚ್ಚಿಸಲು ಸಂಪೂರ್ಣ ಕಿಟ್‌ಗಳು ಹಾಗೂ ಮಧ್ಯಾಹ್ನದೂಟ, ಉಚಿತ ಪಠ್ಯಪುಸ್ತಕಗಳು ಮತ್ತು ಪ್ರಾಥಮಿಕ ಲೇಖನ ಸಾಮಗ್ರಿಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ ತಳಮಟ್ಟದ ವಾಸ್ತವವು ಈ ಉದ್ದೇಶಗಳಿಂದ ಬಹುದೂರದಲ್ಲಿದೆ ಎಂದು ವರದಿಯು ಬೆಟ್ಟು ಮಾಡಿದೆ.

ಸರಕಾರಿ ಅಲ್ಪಸಂಖ್ಯಾತ ಶಾಲೆಗಳ ವಾಸ್ತವ ಸ್ಥಿತಿಯ ವಸ್ತುನಿಷ್ಠ ಮೌಲ್ಯಮಾಪನ, ಶೈಕ್ಷಣಿಕ ಪ್ರಗತಿಗೆ ಅಡ್ಡಿಯನ್ನುಂಟು ಮಾಡುವ ಆಡಳಿತ, ಮೂಲಸೌಕರ್ಯ ಮತ್ತು ಬೋಧಕ ವೃಂದದ ಕಲ್ಯಾಣ ಇವುಗಳಲ್ಲಿಯ ಕೊರತೆಗಳನ್ನು ಗುರುತಿಸುವುದು ಹಾಗೂ ಅವುಗಳನ್ನು ನಿವಾರಿಸಲು ಕ್ರಮಗಳನ್ನು ಸೂಚಿಸುವುದು;ಈ ಮೂರು ಪ್ರಮುಖ ಉದ್ದೇಶಗಳೊಂದಿಗೆ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಬಹುತೇಕ ಈ ಎಲ್ಲ ವಿಷಯಗಳಲ್ಲಿ ತೀವ್ರ ಮತ್ತು ವ್ಯವಸ್ಥಿತ ನ್ಯೂನತೆಗಳನ್ನು ವರದಿಯು ಬೆಟ್ಟು ಮಾಡಿದೆ.

ಮೂಲಸೌಕರ್ಯ ಮಟ್ಟದಲ್ಲಿ ಹೆಚ್ಚಿನ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಆತಂಕಕಾರಿ ಕೊರತೆಯನ್ನು ವರದಿಯು ದಾಖಲಿಸಿದೆ. ಗ್ರಂಥಾಲಯಗಳು,ಆಟದ ಮೈದಾನಗಳು,ವಿಜ್ಞಾನ ಪ್ರಯೋಗಾಲಯಗಳು, ಕಂಪ್ಯೂಟರ್ ಲ್ಯಾಬ್‌ಗಳು, ಕಚೇರಿ ಸಿಬ್ಬಂದಿ, ಕಾವಲುಗಾರರು ಮತ್ತು ನೈರ್ಮಲ್ಯಕಾರ್ಮಿಕರ ಹೆಚ್ಚಿನ ಕೊರತೆಯಿದೆ ಎಂದು ವರದಿಯು ತಿಳಿಸಿದೆ.

ಸ್ಥಳಾವಕಾಶದ ತೀವ್ರ ಕೊರತೆಯಿಂದಾಗಿ ಹಲವಾರು ಶಾಲೆಗಳು ಮೊಗಸಾಲೆಗಳು, ಬಾಲ್ಕನಿಗಳು, ದಾಸ್ತಾನು ಕೊಠಡಿಗಳು ಮತ್ತು ಮೆಟ್ಟಿಲುಗಳ ಮೇಲೂ ತರಗತಿಗಳನ್ನು ನಡೆಸಬೇಕಾದ ಸ್ಥಿತಿಯಿದೆ.

ತರಗತಿಗಳ ವಾತಾಯನ ವ್ಯವಸ್ಥೆಗಳು ಕಳಪೆಯಾಗಿದ್ದು, ಶೌಚಾಲಯಗಳಂತೂ ಅತ್ಯಂತ ದುಃಸ್ಥಿತಿಯಲ್ಲಿವೆ. ಬಾಗಿಲುಗಳು,ಬೆಳಕಿನ ವ್ಯವಸ್ಥೆ ಅಥವಾ ನೈರ್ಮಲ್ಯ ಸೌಲಭ್ಯಗಳಿಲ್ಲದ ಈ ಶೌಚಾಲಯಗಳಿಂದಾಗಿ ವಿದ್ಯಾರ್ಥಿನಿಯರು ಹೆಚ್ಚಿನ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪೂರೈಸಲಾದ ಸಮವಸ್ತ್ರಗಳು ಸಹ ಕಳಪೆ ಗುಣಮಟ್ಟದ್ದಾಗಿದ್ದು, ಆರೇ ತಿಂಗಳುಗಳಲ್ಲಿ ಹರಿದುಹೋಗುತ್ತಿವೆ.

ಬೋಧಕ ವೃಂದಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಅಷ್ಟೇ ಗಂಭೀರವಾಗಿವೆ. ಹೆಚ್ಚಿನ ಎಂಎಎಂಎಸ್ ಶಾಲೆಗಳು ಕಾಯಂ ಶಿಕ್ಷಕರು ಅಥವಾ ಕಾಯಂ ಮುಖ್ಯೋಪಾಧ್ಯಾಯರನ್ನು ಹೊಂದಿಲ್ಲ, ಬದಲಾಗಿ ಅತಿಥಿ ಅಧ್ಯಾಪಕರನ್ನು ಹೆಚ್ಚು ಅವಲಂಬಿಸಿವೆ. ಈ ಶಿಕ್ಷಕರಿಗೆ ಮಾಸಿಕ ಕೇವಲ 12,500 ರೂ.ವೇತನವನ್ನು ನೀಡಲಾಗುತ್ತಿದ್ದು, ಅವರಿಗೆ ಉದ್ಯೋಗ ಭದ್ರತೆಯಂತೂ ಇಲ್ಲವೇ ಇಲ್ಲ. ವೇತನ ಪಾವತಿಯಲ್ಲಿ ಆಗಾಗ್ಗೆ ವಿಳಂಬವಾಗುತ್ತಿದ್ದು, ಇದು ಶಿಕ್ಷಕರ ನೈತಿಕ ಸ್ಥೈರ್ಯ ಮತ್ತು ಬೋಧನಾ ಗುಣಮಟ್ಟದ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತಿದೆ ಎಂದು ವರದಿಯು ಕಳವಳವನ್ನು ವ್ಯಕ್ತಪಡಿಸಿದೆ.

ಹಲವಾರು ಶಾಲೆಗಳಲ್ಲಿ ದೈಹಿಕ ತರಬೇತಿ ಶಿಕ್ಷಕರ ಮತ್ತು ಪ್ರಥಮ ದರ್ಜೆ ಸಹಾಯಕರ ಕೊರತೆಯಿದೆ ಎಂದು ವರದಿಯು ಆರೋಪಿಸಿದೆ. ಈ ನ್ಯೂನತೆಗಳು ಶೈಕ್ಷಣಿಕ ಫಲಿತಾಂಶಗಳ ಮೇಲೆ ಪರಿಣಾಮ ಬೀರುತ್ತಿದ್ದು, ಹಲವಾರು ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶವು ಶೆ.77ಕ್ಕಿಂತ ಕೆಳಗೆ ಕುಸಿದಿದೆ. ಇದು ರಾಜ್ಯದ ಸರಾಸರಿಗಿಂತ ಗಮನಾರ್ಹವಾಗಿ ಕಡಿಮೆಯಿದೆ.

ದಾಖಲಾತಿ ಮಾದರಿಗಳು ಬಿಕ್ಕಟ್ಟನ್ನು ಇನ್ನಷ್ಟು ಎತ್ತಿ ತೋರಿಸಿವೆ. ಪ್ರವೇಶಗಳು ಕಡಿಮೆಯಾಗಿಯೇ ಉಳಿದಿದ್ದು,ಶಾಲೆಗಳನ್ನು ತೊರೆಯುವವರ ಸಂಖ್ಯೆಯೂ ಅಧಿಕವಾಗಿದೆ.

ಬೆರಳೆಣಿಕೆಯಷ್ಟು ಶಾಲೆಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವು ಕಾಯಂ ಮುಖ್ಯೋಪಾಧ್ಯಾಯರು, ಹೆಚ್ಚಿನ ಕಾಯಂ ಶಿಕ್ಷಕರು, ಸಾಕಷ್ಟು ಮೂಲಸೌಕರ್ಯ ಹೊಂದಿವೆ. ಇವುಗಳೊಂದಿಗೆ ಸಮುದಾಯದ ಮತ್ತು ಎನ್‌ಜಿಒಗಳ ಸಕ್ರಿಯ ಪಾಲ್ಗೊಳ್ಳುವಿಕೆಯೂ ದಾಖಲಾತಿ ಮತ್ತು ಫಲಿತಾಂಶಗಳಲ್ಲಿ ಸುಧಾರಣೆಯೊಂದಿಗೆ ನೇರ ಸಂಬಂಧವನ್ನು ಹೊಂದಿವೆ ಎಂದು ವರದಿಯು ಒತ್ತಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News