×
Ad

ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಜಾರಿಗೆ ತಂದ ಡಿಸಿಆರ್‌ಇ ಠಾಣೆಗಳು ಪರಿಣಾಮಕಾರಿಯಾಗಲಿ: ಡಾ.ಜಿ.ಪರಮೇಶ್ವರ್

Update: 2026-01-18 18:24 IST

ಬೆಂಗಳೂರು : ಪರಿಶಿಷ್ಟ ಜಾತಿ, ಪಂಗಡ(ಎಸ್‍ಸಿ-ಎಸ್‍ಟಿ)ದ ಜನರ ಮೇಲಿನ ದೌರ್ಜನ್ಯ ತಡೆಗಟ್ಟಿ, ಆ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಡಿಸಿಆರ್‌ಇ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಡಿಸಿಆರ್‌ಇ ಪೊಲೀಸ್ ಠಾಣೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಲಹೆ ನೀಡಿದ್ದಾರೆ.

ರವಿವಾರ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ‘ಹಿರಿಯ ಪೊಲೀಸ್ ಅಧಿಕಾರಿಗಳ 2ನೇ ದಿನದ ಸಮಾವೇಶ'ದಲ್ಲಿ ಪಾಲ್ಗೊಂಡು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಂತರ್ಜಾತಿ ವಿವಾಹವಾದ ಯುವತಿಯನ್ನು ಆಕೆಯ ತಂದೆಯೇ ಕೊಲೆ ಮಾಡುತ್ತಾನೆಂದರೆ ಹೇಗೆ ಸಹಿಸುವುದು. ಎಸ್‍ಸಿ-ಎಸ್‍ಟಿ ಸಮುದಾಯದ ಜನರ ಮೇಲಾಗುತ್ತಿರುವ ಶೋಷಣೆಯನ್ನು ತಡೆಗಟ್ಟಲು ಅನುಕೂಲವಾಗಲಿದೆ ಎಂಬ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಡಿಸಿಆರ್‌ಇ ಠಾಣೆಗಳನ್ನು ಮಾಡಲಾಗಿದೆ. ಶೋಷಿತರೊಂದಿಗೆ ನಾವಿದ್ದೇವೆಂಬ ಭರವಸೆ ಮೂಡಿಸಬೇಕಲ್ಲವೇ? ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಪೊಲೀಸ್ ಇಲಾಖೆಯ ಮೇಲೆ ಜವಾಬ್ದಾರಿ ಹೆಚ್ಚಿದೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಉತ್ತಮವಾಗಿದ್ದರೆ, ಆರ್ಥಿಕತೆ, ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲವೂ ಅಭಿವೃದ್ಧಿಯಾಗುತ್ತದೆ ಎಂದ ಅವರು, ಕೆಲವು ರಾಜ್ಯಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ. ಆರ್ಥಿಕವಾಗಿ ಹಿಂದೆ ಉಳಿದಿವೆ. ಅಲ್ಲಿನ ಕಾನೂನು ಸುವ್ಯವಸ್ಥೆ ಉತ್ತಮವಾಗದಿರುವುದೇ ಇದಕ್ಕೆ ಕಾರಣ ಎಂದು ಜಿ.ಪರಮೇಶ್ವರ್ ತಿಳಿಸಿದರು.

ದೇಶದಲ್ಲಿ 25 ವರ್ಷಗಳಿಂದ ಕರ್ನಾಟಕವನ್ನು ಬೇರೆಯೇ ದೃಷ್ಟಿಯಿಂದ ನೋಡಲಾಗುತ್ತಿದೆ. ರಾಜ್ಯದಲ್ಲಿ ವರ್ಷ 10 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದು ಇದಕ್ಕೆ ಕಾರಣ ಎಂದು ಜಿ.ಪರಮೇಶ್ವರ್ ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಮೂಡಿಸುವಂತ ವಿಚಾರಗಳನ್ನು ಪೊಸ್ಟ್ ಮಾಡಲಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗಿ ಗಲಭೆಗಳಾಗುತ್ತವೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಿ, ಆರಂಭಿಕ ಹಂತದಲ್ಲೇ ಮಟ್ಟ ಹಾಕಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.

ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ವರದಿಯಾಗುತ್ತಿದೆ. ಸ್ಥಳೀಯ ಪೊಲೀಸರು ಏನು ಮಾಡುತ್ತಿದ್ದಾರೆ? ಪ್ರತಿ ಏರಿಯಾದ ಮಾಹಿತಿ ಪೊಲೀಸರಿಗೆ ಗೊತ್ತಿರಬೇಕು ಎಂಬ ಉದ್ದೇಶದಿಂದ ‘ಮನೆಮನೆಗೆ ಪೊಲೀಸ್' ಕಾರ್ಯಕ್ರಮವನ್ನು ತರಲಾಗಿದೆ. ಯಾರು, ಎಲ್ಲಿಂದ ಬಂದಿದ್ದಾರೆ ಎಂದು ಪೊಲೀಸ್ ಠಾಣೆ ಹಂತದಲ್ಲಿ ತಿಳಿದುಕೊಳ್ಳಲು ಅಗುವುದಿಲ್ಲವೆ? ಎಂದು ಜಿ.ಪರಮೇಶ್ವರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಿರಿಯ ಪೊಲೀಸ್ ಅಧಿಕಾರಿಗಳು ಶಾಲಾ-ಕಾಲೇಜುಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಉಪನ್ಯಾಸ ನಡೆಸಬೇಕು. ಯುವ ಸಮೂಹದಲ್ಲಿ ಬದಲಾವಣೆ ಮೂಡುತ್ತದೆ. ಎಲ್ಲ ಅಧಿಕಾರಿಗಳು ಸಭೆಯಿಂದ ಹೋಗುವ ಮೊದಲು, ‘ಡ್ರಗ್ಸ್ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುತ್ತೇವೆ’ ಎಂದು ಆತ್ಮಸಾಕ್ಷಿಯಿಂದ ಪ್ರಮಾಣ ಮಾಡಬೇಕು ಎಂದು ಜಿ.ಪರಮೇಶ್ವರ್ ತಿಳಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡದಿದ್ದರೆ ಜನಸಮುದಾಯ ಹಾಳಾಗುತ್ತದೆ. ಎಲ್ಲ ಐಪಿಎಸ್ ಅಧಿಕಾರಿಗಳ ಹಿನ್ನೆಲೆ ಗೊತ್ತಿದೆ. ಬಹುತೇಕರು ಒಂದಲ್ಲ ಒಂದು ರೀತಿಯಲ್ಲಿ, ಬಡತನ, ಕಷ್ಟಗಳಿಂದ ಬಂದಿದ್ದೀರಿ. ಸಮಾಜದ ಪರಿಸ್ಥಿತಿಯ ಬಗ್ಗೆ ನಿಮಗೆ ಹೆಚ್ಚಿನ ಅರಿವಿದೆ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನ ಪಡೆಯಬೇಕು ಎಂದು ಜಿ.ಪರಮೇಶ್ವರ್ ಹೇಳಿದರು.

ರಾಜ್ಯದ ಎಫ್‍ಎಸ್‍ಎಲ್ ಉತ್ತಮವಾಗಿ ಕೆಲಸ ಮಾಡುತ್ತಿದೆ. ಈ ಬಗ್ಗೆ ಹೆಮ್ಮೆ ಇದೆ. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಅತ್ಯುತ್ತಮಗೊಳಿಸಲಾಗುವುದು ಎಂದು ಅವರು ತಿಳಿಸಿದರು. ಸಮಾವೇಶದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಇಲಾಖೆಯ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ, ಗುಪ್ತವಾರ್ತೆ ಎಡಿಜಿಪಿ ರವಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ನೋಡಿಕೊಂಡು ಸುಮ್ಮನಿರಬೇಕೆ..?:ಪೊಲೀಸರು ಸಮಜಾಘಾತುಕರೊಂದಿಗೆ ಕೈಜೋಡಿಸಬಾರದು ಎಂದು ಪ್ರತಿಸಭೆಯಲ್ಲಿಯೂ ಎಚ್ಚರಿಸಲಾಗುತ್ತದೆ. ಆದಾಗ್ಯೂ ಈ ವಿಚಾರ ಮರುಕಳಿಸುತ್ತಿದೆ. ಠಾಣೆಯಲ್ಲಿ ಕುಳಿತು ಅಕ್ರಮ ವ್ಯವಹಾರ ನಡೆಸುವುದನ್ನು ಸಹಿಸುವುದಿಲ್ಲ. ಅಂತಹವರ ಅನಿವಾರ್ಯತೆ ಪೊಲೀಸ್ ಇಲಾಖೆಗೆ ಇಲ್ಲ. ರೌಡಿಗಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಪೊಲೀಸ್ ಅಧಿಕಾರಿಗಳು ಪಾಲ್ಗೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಂಡು ಸುಮ್ಮನಿರಬೇಕೆ? ಈ ಬಗ್ಗೆ ಎಲ್ಲ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ’

-ಡಾ.ಜಿ.ಪರಮೇಶ್ವರ್, ಗೃಹ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News