ಅಂಗಾಂಗ ಕಸಿ ಆಸ್ಪತ್ರೆಯಲ್ಲಿ ಶೇ.70ರಷ್ಟು ರಿಯಾಯಿತಿ : ಡಾ.ಶರಣಪ್ರಕಾಶ ಪಾಟೀಲ್
ಬೆಂಗಳೂರು : ಕರ್ನಾಟಕದಲ್ಲಿ ದೇಶದ ಪ್ರಪ್ರಥಮ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಅಝೀಂ ಪ್ರೇಜಿ ಪ್ರತಿಷ್ಠಾನ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವತಿಯಿಂದ ಸಾವಿರ ಹಾಸಿಗೆಗಳ ಚಾರಿಟೇಬಲ್ ಸೂಪರ್ ಸ್ಪೇಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ಅಝೀಂ ಪ್ರೇಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ‘ಅಂಗಾಂಗ ದಾನ ಮಹಾದಾನ’ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಆಗುತ್ತಿರುವುದು ಸಂತಸ ತಂದಿದೆ. ಕೆಲ ವರದಿಗಳ ಪ್ರಕಾರ 5 ಸಾವಿರ ರೋಗಿಗಳು ಕಿಡ್ನಿ ಕಸಿ ಚಿಕಿತ್ಸೆಗಾಗಿ ಕಾಯುತ್ತಿದ್ದಾರೆ. ಇನ್ನುಳಿದ ಹಲವು ರೋಗಿಗಳಿಗೆ ಬಹು ಅಂಗಾಂಗ ಕಸಿ ಚಿಕಿತ್ಸೆ ಬೇಕಾಗಿದೆ. ಇಂತಹ ಸಂದರ್ಭದಲ್ಲಿ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆಗೆ ಅಝೀಂ ಪ್ರೇಮ್ ಜಿ ಪ್ರತಿಷ್ಠಾನ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಶೇ.70ರಷ್ಟು ರಿಯಾಯಿತಿಯಲ್ಲಿ ಸೇವೆ ದೊರೆಯಲಿದೆ ಎಂದು ತಿಳಿಸಿದರು.
ಈ ಆಸ್ಪತ್ರೆಯನ್ನು 1000 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು ಈ ಮೂಲಕ ದುರ್ಬಲ ವರ್ಗಗಳು ಮತ್ತು ಸೂಕ್ತ ಸೇವೆಗಳಿಂದ ವಂಚಿತರಾದ ಜನರಿಗೆ ಉತ್ತಮ ಗುಣಮಟ್ಟದ ಆರೈಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಒಟ್ಟಾರೆ ಶೇ.75 ರಷ್ಟು ಹಾಸಿಗೆಗಳನ್ನು ರೋಗಿಗಳಿಗೆ ಉಚಿತವಾಗಿ ಒದಗಿಸುವ ಗುರಿ ಹೊಂದಲಾಗಿದ್ದು, ಉಳಿದ ಹಾಸಿಗೆಗಳಿಗೆ ತೃತೀಯ ಹಂತದ ಆರೈಕೆ ಒದಗಿಸುವ ಸರಕಾರಿ ಆಸ್ಪತ್ರೆಗಳ ದರಕ್ಕೆ ಸರಿಸಮಾನವಾದ ದರವನ್ನು ವಿಧಿಸಲಾಗುತ್ತದೆ ಎಂದು ಹೇಳಿದರು.
ಈ ಆಸ್ಪತ್ರೆಯು ವಿವಿಧ ಸ್ಪೆಷಾಲಿಟಿಗಳನ್ನು ಒದಗಿಸಲಿದ್ದು, ಅಂಗಾಂಗ ಕಸಿಗೆ ವಿಶೇಷ ಒತ್ತನ್ನು ನೀಡಲಾಗುತ್ತದೆ. ಅಲ್ಲದೆ ಇದು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ತನ್ನ ಕೊಡುಗೆಯನ್ನು ನೀಡಲಿದೆ. ಈ ಉಪಕ್ರಮವು, ಅತ್ಯಾಧುನಿಕ ತೃತೀಯ ಹಂತದ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವ ಮೂಲಕ ನಗರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಅದಕ್ಕೆ ಪೂರಕವಾಗಿ ಕೊಡುಗೆ ನೀಡುವ ಉದ್ದೇಶವನ್ನು ಹೊಂದಿದೆ ಎಂದೂ ಅವರು ಉಲ್ಲೇಖಿಸಿದರು.