ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 42,345 ಮನೆಗಳ ಹಂಚಿಕೆ : ಝಮೀರ್ ಅಹ್ಮದ್ ಖಾನ್
ಹುಬ್ಬಳ್ಳಿ : ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಜ.24ರಂದು 42,345 ಬಡ ಕುಟುಂಬಗಳಿಗೆ ಮನೆಗಳ ಹಂಚಿಕೆ ಮಾಡಲಾಗುವುದು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.24ರಂದು ಬೆಳಗ್ಗೆ 11ಕ್ಕೆ ಹುಬ್ಬಳ್ಳಿಯ ಮಂಟೂರ್ ರಸ್ತೆಯಲ್ಲಿ ಫಲಾನುಭವಿಗಳಿಗೆ ಮನೆ ಹಂಚಿಕೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಜ್ಯಸಭೆ ಪ್ರತಿ ಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ಯೋಜನೆಯಲ್ಲಿ ಒಟ್ಟು 1,80,253 ಮನೆಗಳ ನಿರ್ಮಾಣ ಆಗುತ್ತಿದೆ. ರಾಜ್ಯ ಸರಕಾರ ತಲಾ 4 ಲಕ್ಷ ರೂ. ಕೊಡುತ್ತಿದ್ದು, ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಬ್ಸಿಡಿ ಸಿಗಲಿದೆ. ಫಲಾನುಭವಿಗಳು ಕೇವಲ ಒಂದು ಲಕ್ಷ ರೂ. ಪಾವತಿಸಬೇಕು. ವೀಡಿಯೊ ಕಾನ್ಫರೆನ್ಸ್ ಮೂಲಕ ಕೊಳೆಗೇರಿ ವಾಸಿಗಳಿಗೆ 20,363 ಹಕ್ಕುಪತ್ರ ನೀಡಲಾಗುವುದು ಎಂದರು.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ಬಡವರಿಗೆ ಸೂರು ಕಲ್ಪಿಸುವ ದೂರದೃಷ್ಟಿಯೊಂದಿಗೆ ಮನೆಗಳನ್ನು ನಿರ್ಮಿಸಿ, ವಿತರಣೆ ಮಾಡಲಾಗುತ್ತಿದೆ. ಆಸ್ಪತ್ರೆ, ಗ್ರಂಥಾಲಯ ಹಾಗೂ ಸಮುದಾಯ ಭವನವನ್ನು ಸಹ ಇದು ಒಳಗೊಂಡಿರಲಿದೆ. ಈಗಾಗಲೇ 860 ಮನೆಗಳನ್ನು ಆಶ್ರಯ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಾಜಿ ಸಂಸದ ಐ.ಜಿ.ಸನದಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮುಖಂಡರಾದ ಅನ್ವರ್ ಬಾಷಾ, ದೀಪಕ್ ಚಿಂಚೋರೆ, ಅಲ್ತಾಫ್ ಹಳ್ಳೂರ್, ಅನಿಲಕುಮಾರ ಪಾಟೀಲ್ ಇತರರು ಉಪಸ್ಥಿತರಿದ್ದರು.
ಈಗಾಗಲೇ ಮೊದಲ ಹಂತದಲ್ಲಿ 36,789 ಮನೆಗಳನ್ನು ವಿತರಿಸಲಾಗಿದೆ. ಎರಡನೇ ಹಂತದಲ್ಲಿ 42,345 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ಮೂರನೇ ಹಂತದಲ್ಲಿ ಸುಮಾರು 30 ಸಾವಿರ ಮನೆಗಳನ್ನು ಹಂಚಿಕೆ ಮಾಡುವ ಗುರಿ ಹೊಂದಲಾಗಿದೆ. ಮೂರನೇ ಹಂತದ ಮನೆಗಳನ್ನು ಎಪ್ರಿಲ್, ಮೇ ತಿಂಗಳಲ್ಲಿ ವಿತರಿಸಲಾಗುವುದು. ಈಗ ನೀಡುತ್ತಿರುವ ಮನೆಗಳ ಪೈಕಿ ಹುಬ್ಬಳ್ಳಿಯಲ್ಲಿ 1,008 ಸೇರಿ ಧಾರವಾಡ ಜಿಲ್ಲೆಯಲ್ಲಿ 2,767 ಮನೆ ಹಂಚಿಕೆ ಮಾಡಲಾಗುತ್ತಿದೆ.
-ಸಚಿವ ಝಮೀರ್ ಅಹ್ಮದ್ ಖಾನ್