Bengaluru | ಹಿಟ್ ಆ್ಯಂಡ್ ರನ್ : ಮೂವರು ಮೃತ್ಯು
ಬೆಂಗಳೂರು : ಹಿಟ್ ಆ್ಯಂಡ್ ರನ್‍ಗೆ ಮೂವರು ಯುವಕರು ಮೃತಪಟ್ಟಿರುವ ಘಟನೆ ದೇವನಹಳ್ಳಿ ತಾಲೂಕಿನ ಅಗಲಕೋಟೆ ಬಳಿ ಶನಿವಾರ ವರದಿಯಾಗಿದೆ.
ಘಟನೆಯಲ್ಲಿ ಚಿಕ್ಕಜಾಲ ಮೂಲದ ತೌಸಿಫ್ ಸೇರಿದಂತೆ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಭೀಕರ ದೃಶ್ಯವು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ದೇವನಹಳ್ಳಿಯಿಂದ ಬೂದಿಗೆರೆ ರಸ್ತೆಯಲ್ಲಿ ಮೂವರು ಯುವಕರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ದ್ವಿಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಡಿವೈಡರ್ ದಾಟಿ ಬಂದು, ಪಕ್ಕದ ರಸ್ತೆಯಲ್ಲಿ ಎದುರಿನಿಂದ ಬಂದ ಟಿಪ್ಪರ್ ನಡಿ ಸಿಲುಕಿದೆ. ಅಪಘಾತದ ರಭಸಕ್ಕೆ ಮೂವರು ಯುವಕರ ದೇಹಗಳು ಛಿದ್ರಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ನಂತರ ಟಿಪ್ಪರ್ ಚಾಲಕ ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.