×
Ad

ಸಿಎಂ ಸಿದ್ದರಾಮಯ್ಯ 19 ಬಜೆಟ್ ಮಂಡಿಸುವುದು ನಿಶ್ಚಿತ : ಡಾ.ಯತೀಂದ್ರ

Update: 2025-03-09 19:16 IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ 2026ರಲ್ಲಿಯೂ ಸೇರಿದಂತೆ 19 ಬಜೆಟ್ ಮಂಡಿಸುವುದು ನಿಶ್ಚಿತ. ಇದರಲ್ಲಿ ಯಾವ ಅನುಮಾನ ಇಲ್ಲ ಎಂದು ವಿಧಾನಪರಿಷತ್ ಸದಸ್ಯ, ಸಿಎಂ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹೈಕಮಾಂಡ್ ಮತ್ತು ಶಾಸಕರು ಸಿಎಂ ಸಿದ್ದರಾಮಯ್ಯ ಅವರ ನಾಯಕತ್ವದ ಪರವಾಗಿರುವುದರಿಂದ ಅವರು 19ನೇ ಬಜೆಟ್ ಕೂಡ ಮಂಡಿಸುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಹೈಕಮಾಂಡ್ ಮತ್ತು ರಾಜ್ಯದ ಶಾಸಕರು ಸಿದ್ದರಾಮಯ್ಯ ಪರವಾಗಿ ಇದ್ದಾರೆ. ವಿಪಕ್ಷಗಳ ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮುಡಾ ಹಗರಣ ಕುರಿತು ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ನನ್ನ ತಾಯಿ ಪಾರ್ವತಿ ಅವರಿಗೆ ನೀಡಲಾಗಿದ್ದ ಈ.ಡಿ. ನೋಟಿಸ್‍ಗೆ ಹೈಕೋರ್ಟ್‍ನಿಂದ ರಿಲೀಫ್ ದೊರೆತಿದ್ದು, ಹೈಕೋರ್ಟ್ ತೀರ್ಪಿನಿಂದ ಸಮಾಧಾನವಾಗಿದೆ. ನಮ್ಮ ತಾಯಿ ಮಾನಸಿಕವಾಗಿ ನೊಂದಿದ್ದರು ಎಂದರು.

ಯಾವ ತಪ್ಪು ಮಾಡದೇ ಇದ್ದರೂ ಸುಮ್ಮನೇ ಗೂಬೆ ಕೂರಿಸಿದ್ದರು. ನಮ್ಮ ತಂದೆಯನ್ನು ಪ್ರಕರಣದಲ್ಲಿ ಸಿಲುಕಿಸಿ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು. ಈ ಕಾರಣಕ್ಕಾಗಿ ನಾವು 14 ನಿವೇಶನಗಳನ್ನು ವಾಪಸ್ ಕೊಟ್ಟಿದ್ದೆವು. ನ್ಯಾಯಯುತವಾಗಿ ನಮಗೆ ಆ ಸೈಟುಗಳು ಬರಬೇಕಿದೆ. ಕಾನೂನಿನಲ್ಲಿ ನಮ್ಮದು ತಪ್ಪಿಲ್ಲ ಎಂದು ಬರುತ್ತಿದೆ. ಆದ್ದರಿಂದ ತನಿಖಾ ಪ್ರಕ್ರಿಯೆ ಮುಗಿದ ಮೇಲೆ ನ್ಯಾಯಾಲಯದ ಮೂಲಕವೇ ಅವುಗಳನ್ನು ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ನಿರ್ಧಾರ ಮಾಡುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News