×
Ad

ಬಾನು ಮುಷ್ತಾಕ್‍ಗೆ ಬೂಕರ್ ಪ್ರಶಸ್ತಿ ಭರವಸೆಯ ಪ್ರತೀಕ : ಡಾ.ಪುರುಷೋತ್ತಮ ಬಿಳಿಮಲೆ

Update: 2025-06-02 23:49 IST

ಬೆಂಗಳೂರು : ದೇಶದ ಸಂಸ್ಕೃತಿಯಿಂದಲೇ ಮುಸ್ಮಿಂ ಸಮುದಾಯವನ್ನು ಅಳಿಸಿ ಹಾಕುವ ಮಾತುಗಳು ಗಟ್ಟಿಯಾಗಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಕನ್ನಡದ ಪ್ರಮುಖ ಲೇಖಕಿ ಬಾನು ಮುಷ್ತಾಕ್‍ ಅವರಿಗೆ ಬೂಕರ್ ಪ್ರಶಸ್ತಿ ಬಂದಿರುವುದು ಭರವಸೆಯ ಪ್ರತೀಕವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಾನು ಮುಷ್ತಾಕ್‌ ಹಾಗೂ ದೀಪಾ ಭಸ್ತಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಬಾನು ಮುಷ್ತಾಕ್ ತಮ್ಮನ್ನು ಜಾತ್ರೆಯಲ್ಲಿ ನಿಂತ ಏಕಾಂಗಿ ಎಂದು ಕರೆದುಕೊಳ್ಳುತ್ತಾರೆ. ಮುಸ್ಲಿಂ ಮಹಿಳೆಯಾಗಿ ಹುಟ್ಟಿದ ಈ ರೀತಿಯ ಏಕಾಂಗಿತನವೇ ಅವರನ್ನು ಜಗತ್ತಿನ ಮುಖ್ಯ ಲೇಖಕಿಯಾಗಿ ರೂಪಿಸಿದ್ದು, ಇದರ ಪ್ರಾಮುಖ್ಯತೆಯನ್ನು ನಾಗರಿಕ ಸಮಾಜವು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಹಾರ್ಟ್ ಲ್ಯಾಂಪ್ ಕೃತಿಯನ್ನು ಕೇವಲ ಶೈಕ್ಷಣಿಕ ಚೌಕಟ್ಟಿನಲ್ಲಿ ನೋಡಬೇಕಿಲ್ಲ. ಅದರಾಚೆಗೂ ಈ ಕೃತಿಯ ಮಹತ್ವ ವಿಸ್ತರಿಸಿದ್ದು, ಕೃತಿಯ ಮಾನವೀಯ ಮತ್ತು ಸಾಮಾಜಿಕ ನಿಲುವುಗಳು ಸಾರ್ವಕಾಲಿಕ ಮತ್ತು ಸಾರ್ವತ್ರಿಕವಾಗಿವೆ ಎಂದಿರುವ ಬಿಳಿಮಲೆ, 2010ರ ಜ್ಞಾನಪೀಠದ ಬಳಿಕ ಕನ್ನಡಕ್ಕೆ ಸಂದ ಅತ್ಯುನ್ನತ ಗೌರವ ಇದಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಸ್ತಿ ಜೋಡಿ ಇದನ್ನು ಸಾಧ್ಯವಾಗಿಸಿರುವುದು ಕನ್ನಡಿಗರೆಲ್ಲರ ಹೆಮ್ಮೆಗೆ ಪಾತ್ರವಾಗಿದೆ ಎಂದರು.

ಅನಂತಮೂರ್ತಿ ಅವರ ಸಂಸ್ಕಾರ ಕೃತಿಯನ್ನು ಎ.ಕೆ.ರಾಮಾನುಜನ್ ಅನುವಾದಿಸಿದ್ದರು. ಆ ಕೃತಿಗೆ ಬೂಕರ್ ಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತ್ತು. ದೀಪಾ ಭಸ್ತಿ ಕನ್ನಡಕ್ಕೆ ಈ ಕೊರತೆಯನ್ನು ಕರ್ನಾಟಕದ ಬಹುಭಾಷಾ ನೆಲೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಉತ್ಕೃಷ್ಟವಾಗಿ ತಮ್ಮ ಅನುವಾದ ಕಾರ್ಯವನ್ನು ನಿರ್ವಹಿಸುವ ಮೂಲಕ ನೀಗಿಸಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ. ವಿ.ಪಿ.ನಿರಂಜನಾರಾಧ್ಯ, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News