×
Ad

ಫಸಲು ಬಿಮಾ ಬಿಜೆಪಿ ಪ್ರಾಯೋಜಿತ ಗೋಲ್ ಮಾಲ್ ಯೋಜನೆ: ಈಶ್ವರ ಖಂಡ್ರೆ

Update: 2025-12-15 12:17 IST

ಬೆಂಗಳೂರ, ಡಿ 15: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ರೈತರು, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಪಾವತಿಸಿರುವ ಕಂತಿನ ಹಣ ಎಷ್ಟು? ಈವರೆಗೆ ರೈತರಿಗೆ ನೀಡಿರುವ ಪರಿಹಾರ ಎಷ್ಟು ಎಂಬ ಬಗ್ಗೆ ಕೇಂದ್ರ ಸರಕಾರ ಶ್ವೇತಪತ್ರ ಹೊರಡಿಸಲಿ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸವಾಲು ಹಾಕಿದ್ದಾರೆ.

ಸದನದಲ್ಲಿ ತಾವು ಫಸಲು ಬಿಮಾ ಯೋಜನೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾಗಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿಮೆ ಯೋಜನೆ ಬಗ್ಗೆ ಶ್ವೇತಪತ್ರ ಹೊರಡಿಸಿದರೆ ಖಾಸಗಿ ವಿಮಾ ಕಂಪೆನಿಗಳಿಗೆ ಕೇಂದ್ರ ಸರಕಾರ ಹೇಗೆ ಲಾಭ ಮಾಡಿಕೊಡುತ್ತಿದೆ ಎಂಬುದು ಬಟಾ ಬಯಲಾಗಲಿದೆ ಎಂದರು.

ದೇಶಾದ್ಯಂತ ಬೆಳೆ ವಿಮೆ ಯೋಜನೆ ಜಾರಿಯಾದ ದಿನದಿಂದ ಈವರೆಗೆ ವಿಮಾ ಕಂಪನಿಗಳು ಉದ್ದಾರ ಆಗಿದೆಯೇ ಹೊರತು ರೈತರಲ್ಲ. ಇದೊಂದು ಬಿಜೆಪಿ ಪ್ರಾಯೋಜಿತ ಪಕ್ಕಾ ಗೋಲ್ ಮಾಲ್ ಯೋಜನೆ ಎಂದು ಈಶ್ವರ ಖಂಡ್ರೆ ಪುನರುಚ್ಚರಿಸಿದರು.

ಕೋವಿಡ್ ಸಮಯದಲ್ಲಿ ಜನರು ಆಕ್ಸಿಜನ್ ಸಿಗದೇ ರೆಮಿಡಿ ಸಿವೀರ್ ಚುಚ್ಚುಮದ್ದು ಸಿಗದೇ, ಉದ್ಯೋಗವೂ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದಾಗ ಮನೆಯಲ್ಲಿ ಬಾಗಿಲು ಮುಚ್ಚಿ ಕುಳಿತಿದ್ದ ಖೂಬಾ ಈಗ ಬೀದಿಯಲ್ಲಿ ನಿಂತು ವೀರಾವೇಷದಿಂದ ಮಾತನಾಡಿದರೆ ಜನ ನಂಬುವುದಿಲ್ಲ ಅವರಿಗೆ ಸತ್ಯದ ಅರಿವಿದೆ ಎಂದರು.

ಖೂಬಾಗೆ ಮಾಡಲು ಕೆಲಸವಿಲ್ಲ; ಈಗ ನಿರುದ್ಯೋಗಿಯಾಗಿದ್ದಾರೆ ಹೀಗಾಗಿ ಮಾಧ್ಯಮ ಹೇಳಿಕೆ ನೀಡುತ್ತಾ, ಕಾಲ ತಳ್ಳುತ್ತಿದ್ದಾರೆ ಎಂದು ಈಶ್ವರ್ ಖಂಡ್ರೆ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News