ಎಥೆನಾಲ್ ಮಿಶ್ರಣ ವಿವಾದ | ರಾಜ್ಯ ಸರಕಾರದ ವರದಿಗೆ ಬದ್ಧ, ಕೇಂದ್ರ ಸರಕಾರ ಸ್ಪಷ್ಟ ಉತ್ತರ ನೀಡಲಿ: ಸಚಿವ ರಿಝ್ವಾನ್ ಅರ್ಷದ್
63 ಪೆಟ್ರೋಲ್ ಮಾದರಿಗಳ ಪರೀಕ್ಷೆಯಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ಪತ್ತೆ
ಬೆಂಗಳೂರು: ಪೆಟ್ರೋಲ್ನಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಡೆಸಿದ ಪರೀಕ್ಷೆಯ ವರದಿಗೆ ನಾವು ಬದ್ಧರಾಗಿದ್ದೇವೆ. ಪರೀಕ್ಷಾ ವಿಧಾನ ಮತ್ತು ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಯಾವುದೇ ಅನುಮಾನವಿಲ್ಲ ಎಂದು ಸಚಿವ ರಿಝ್ವಾನ್ ಅರ್ಷದ್ ಸ್ಪಷ್ಟಪಡಿಸಿದ್ದಾರೆ.
ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣದ ಕುರಿತು ರಾಜ್ಯ ಸರಕಾರ ನಡೆಸಿದ ಪರೀಕ್ಷೆ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಪ್ರತಿಕ್ರಿಯೆ ಕುರಿತು ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಈ ಗಂಭೀರ ವಿಚಾರಕ್ಕೆ ನೇರವಾಗಿ ಉತ್ತರ ನೀಡುವ ಬದಲು ತೈಲ ಮಾರುಕಟ್ಟೆ ಕಂಪನಿಗಳ ಮೂಲಕ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ನಾಗರಿಕರ ಹಿತದೃಷ್ಟಿಯಿಂದ ಈ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ ಸರಕಾರಕ್ಕೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ. ಜನರ ವಾಹನಗಳ ಸುರಕ್ಷತೆ ಮತ್ತು ಗ್ರಾಹಕರ ಹಕ್ಕುಗಳನ್ನು ಕಾಪಾಡುವುದು ಸರಕಾರದ ಉದ್ದೇಶವಾಗಿದೆ. ರಾಜ್ಯ ಸರ್ಕಾರ ಬಹಿರಂಗಪಡಿಸಿದ ವರದಿಯನ್ನು ದೇಶಾದ್ಯಂತ ಜನರು ಗಂಭೀರವಾಗಿ ಪರಿಗಣಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆ ನಡೆಯುತ್ತಿದೆ ಎಂದರು.
63 ಮಾದರಿಗಳ ಪರೀಕ್ಷೆ, ದಾಖಲೆ ನಮ್ಮಲ್ಲಿದೆ
ರಾಜ್ಯದ ವಿವಿಧ ಪೆಟ್ರೋಲ್ ಬಂಕ್ ಗಳಿಂದ ಸೆಪ್ಟಂಬರ್ 21ರಿಂದ ಅಕ್ಟೋಬರ್ ವರೆಗೆ ಒಟ್ಟು 63 ಮಾದರಿಗಳನ್ನು ನಿಯಮಾನುಸಾರ ಸಂಗ್ರಹಿಸಲಾಗಿದೆ. ಮಾದರಿಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೆಟ್ರೋಲ್ ಬಂಕ್ ಪ್ರತಿನಿಧಿಗಳ ಸಹಿ ಪಡೆಯಲಾಗಿದೆ. ಒಂದು ಮಾದರಿಯನ್ನು ಬಂಕ್ ಗೆ ನೀಡಿ, ಮತ್ತೊಂದನ್ನು ಇಲಾಖೆಯ ಬಳಿ ಇರಿಸಿಕೊಂಡು, ಇನ್ನೊಂದನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಎಲ್ಲ ಪ್ರಕ್ರಿಯೆಗಳಿಗೂ ದಾಖಲೆಗಳಿವೆ ಎಂದು ಸಚಿವರು ತಿಳಿಸಿದರು.
ಮೋಟರ್ ಸ್ಪಿರಿಟ್ಸ್ ಮತ್ತು ಹೈ ಸ್ಪೀಡ್ ಡೀಸೆಲ್ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳ ಪ್ರಕಾರವೇ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಡೆನ್ಸಿಟಿ ಸೇರಿದಂತೆ ಅಗತ್ಯ ಅಂಶಗಳನ್ನು ಪರಿಶೀಲಿಸಲಾಗಿದ್ದು, ಸಂಪೂರ್ಣ ಪ್ರಕ್ರಿಯೆ ದಾಖಲಾಗಿದೆ ಎಂದು ಹೇಳಿದರು.
NABL ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷೆ
ತೈಲ ಕಂಪನಿಗಳಿಗೆ 63 ಮಾದರಿಗಳನ್ನು ಕಳುಹಿಸಿ ಪರೀಕ್ಷಾ ವರದಿ ಕೇಳಲಾಗಿತ್ತು. ಆದರೆ ಕಂಪನಿಗಳು ಸ್ಪಷ್ಟವಾದ ಉತ್ತರ ನೀಡಿಲ್ಲ. ಹೀಗಾಗಿ ಮೂರನೇ ವ್ಯಕ್ತಿಯ ಪರೀಕ್ಷಾ ಪ್ರಯೋಗಾಲಯಕ್ಕೆ ಮಾದರಿಗಳನ್ನು ಕಳುಹಿಸಲಾಗಿದೆ. ಈ ಪ್ರಯೋಗಾಲಯವು ನ್ಯಾಶನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆಂಡ್ ಕ್ಯಾಲಿಬ್ರೇಷನ್ ಲ್ಯಾಬೋರೇಟರೀಸ್ (NABL) ಮಾನ್ಯತೆ ಪಡೆದಿದೆ. ಇದು ಕೇಂದ್ರ ಸರಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವ್ಯಾಪ್ತಿಯ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾಗೆ ಸಂಬಂಧಿಸಿದ ಮಾನ್ಯತಾ ವ್ಯವಸ್ಥೆಯಾಗಿದೆ ಎಂದು ವಿವರಿಸಿದರು.
NABL ಮಾನ್ಯತೆ ಪಡೆದ ಪ್ರಯೋಗಾಲಯದ ಪರೀಕ್ಷಾ ವರದಿಯನ್ನೇ ಪ್ರಶ್ನಿಸುವುದಾದರೆ, ಅಂತಹ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆಯೂ ಪ್ರಶ್ನೆ ಉದ್ಭವಿಸುತ್ತದೆ. ರಾಜ್ಯ ಸರಕಾರ ನಡೆಸಿದ ಪರೀಕ್ಷೆ ತಪ್ಪಾಗಿದೆ ಎನ್ನುವುದಾದರೆ, ಅದಕ್ಕೆ ವೈಜ್ಞಾನಿಕ ಆಧಾರಗಳೊಂದಿಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ತೈಲ ಕಂಪನಿಗಳ ವಿರುದ್ಧ ಸಚಿವರ ಪ್ರಶ್ನೆ
ಎಥೆನಾಲ್ ಮಿಶ್ರಣವು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ ಎಂದು ತೈಲ ಕಂಪನಿಗಳೇ ತಮ್ಮ ಉತ್ತರದಲ್ಲಿ ಹೇಳಿವೆ. ಹಾಗಾದರೆ ಪೆಟ್ರೋಲ್ ಬಂಕ್ಗಳ ಮಾಲಕರು ಅಥವಾ ಡೀಲರ್ ಗಳು ಈ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವೇ ಎಂಬುದು ಸಚಿವರ ಪ್ರಶ್ನೆಯಾಗಿತ್ತು.
ರಾಜ್ಯದಲ್ಲಿ ಆರು ಪ್ರಮುಖ ಟರ್ಮಿನಲ್ಗಳಲ್ಲಿ ಪೆಟ್ರೋಲ್ ಗೆ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಈ ಪ್ರಕ್ರಿಯೆ ತೈಲ ಕಂಪೆನಿಗಳ ನಿಯಂತ್ರಣದಲ್ಲಿರುವುದರಿಂದ, ಮಿತಿಮೀರಿದ ಮಿಶ್ರಣ ಕಂಡುಬಂದರೆ ಅದರ ಜವಾಬ್ದಾರಿಯನ್ನು ಪೆಟ್ರೋಲ್ ಬಂಕ್ ಡೀಲರ್ ಗಳ ಮೇಲೆ ಹೊರಿಸುವುದು ಸರಿಯಲ್ಲ. ಮಿಶ್ರಣದ ಪ್ರಮಾಣವನ್ನು ನಿರ್ಧರಿಸುವವರು ತೈಲ ಕಂಪೆನಿಗಳೇ ಆಗಿರುವುದರಿಂದ ಅವುಗಳೇ ಸ್ಪಷ್ಟನೆ ನೀಡಬೇಕು ಎಂದರು.
ಇನ್ನೊಂದೆಡೆ, ರಾಜ್ಯ ಸರಕಾರದ ಪರೀಕ್ಷಾ ವಿಧಾನವನ್ನು ಪ್ರಶ್ನಿಸುತ್ತಿರುವ ತೈಲ ಕಂಪೆನಿಗಳ ಅಧಿಕಾರಿಗಳು ಹೈಡ್ರೋಮೀಟರ್ ಬಳಸಿ ಪೆಟ್ರೋಲ್ ಬಂಕ್ ಗಳಲ್ಲಿ ಸ್ಥಳದಲ್ಲಿಯೇ ಪರೀಕ್ಷೆ ನಡೆಸುತ್ತಿದ್ದಾರೆ. ಕಡಿಮೆ ವೆಚ್ಚದ ಉಪಕರಣ ಬಳಸಿ ನಡೆಸುವ ಪರೀಕ್ಷೆ ಸರಿಯಾಗಿದ್ದರೆ, ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಯನ್ನು ಏಕೆ ಪ್ರಶ್ನಿಸಲಾಗುತ್ತಿದೆ ಎಂದು ಸಚಿವರು ಪ್ರಶ್ನಿಸಿದರು.
ವಾಹನ ತಯಾರಿಕಾ ಕಂಪೆನಿಗಳ ಆತಂಕದ ಬಗ್ಗೆಯೂ ಪ್ರಸ್ತಾಪ
ಎಥೆನಾಲ್ ಮಿಶ್ರಿತ E20 ಇಂಧನದ ಗುಣಮಟ್ಟ ಹಾಗೂ ವಾಹನಗಳ ಇಂಜಿನ್ ಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಾಹನ ತಯಾರಿಕಾ ವಲಯದ ಆತಂಕಗಳನ್ನೂ ಸಚಿವರು ಪ್ರಸ್ತಾಪಿಸಿದರು.
Society of Indian Automobile Manufacturers (SIAM) ಸಂಸ್ಥೆಯು 2026ರ ಜುಲೈ 28ರಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ E20 ಇಂಧನದಲ್ಲಿನ ಕ್ಲೋರೈಡ್ ಮತ್ತು ಸಲ್ಫರ್ ಪ್ರಮಾಣದ ಕುರಿತು ಕಳವಳ ವ್ಯಕ್ತಪಡಿಸಿತ್ತು. ಇದರಿಂದ ವಾಹನಗಳ ಇಂಜಿನ್ ಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿತ್ತು ಎಂದು ಹೇಳಿದರು.
ಇದೇ ರೀತಿ ಕೆಲವು ವಾಹನ ತಯಾರಿಕಾ ಕಂಪೆನಿಗಳು E20 ಇಂಧನ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ವಾರಂಟಿ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದವು. BMW ಸಂಸ್ಥೆಯ ಪ್ರತಿನಿಧಿಯ ಹೇಳಿಕೆಯನ್ನೂ ಉಲ್ಲೇಖಿಸಿದ ಸಚಿವರು, ಭವಿಷ್ಯದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಸಾಮಾನ್ಯ ಜನರು ಬಳಸುವ ದ್ವಿಚಕ್ರ ಮತ್ತು ಇತರ ವಾಹನಗಳ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದರು.
ಗ್ರಾಹಕರಿಗೆ ಆಯ್ಕೆಯ ಸ್ವಾತಂತ್ರ್ಯ ನೀಡಿ
ರಾಜ್ಯ ಸರ್ಕಾರ ಎಥೆನಾಲ್ ಮಿಶ್ರಣಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿಲ್ಲ. ಆದರೆ ಗ್ರಾಹಕರಿಗೆ E10, E20 ಹಾಗೂ ಶುದ್ಧ ಪೆಟ್ರೋಲ್ ನಂತಹ ಆಯ್ಕೆಗಳನ್ನು ಒದಗಿಸಬೇಕು ಎಂಬುದು ಸರಕಾರದ ಪ್ರಮುಖ ಬೇಡಿಕೆಯಾಗಿದೆ ಎಂದು ಸಚಿವರು ತಿಳಿಸಿದರು.
ಜನರು ತಮ್ಮ ಹಣ ನೀಡಿ ಇಂಧನ ಖರೀದಿಸುತ್ತಾರೆ. ಹೀಗಿರುವಾಗ ಅವರಿಗೆ ಒಂದೇ ರೀತಿಯ ಇಂಧನವನ್ನು ಕಡ್ಡಾಯವಾಗಿ ಖರೀದಿಸುವಂತೆ ಮಾಡುವುದು ಎಷ್ಟು ಸರಿ? ಗ್ರಾಹಕರಿಗೆ ತಮ್ಮ ವಾಹನದ ಸಾಮರ್ಥ್ಯ ಮತ್ತು ಅಗತ್ಯಕ್ಕೆ ಅನುಗುಣವಾಗಿ ಇಂಧನ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು. ಶುದ್ಧ ಪೆಟ್ರೋಲ್ ಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ತಾಂತ್ರಿಕ ಮಾನದಂಡಗಳ ಬಗ್ಗೆ ಸ್ಪಷ್ಟನೆ ನೀಡಲಿ
BISನ IS 17021 ಮಾನದಂಡ ಹಾಗೂ ಅದರ ತಿದ್ದುಪಡಿ-3ರಲ್ಲಿ E20 ಇಂಧನದ ಎಥೆನಾಲ್ ಪ್ರಮಾಣ ನಿರ್ಧರಿಸಲು ನಿರ್ದಿಷ್ಟ ಪರೀಕ್ಷಾ ವಿಧಾನಗಳನ್ನು ಉಲ್ಲೇಖಿಸಲಾಗಿದೆ. FTIR, ವಾಟರ್ ಎಕ್ಸ್ ಟ್ರಾಕ್ಷನ್ ಮತ್ತು ಗ್ಯಾಸ್ ಕ್ರೊಮಟೋಗ್ರಫಿ ಸೇರಿದಂತೆ ನಿಗದಿತ ವಿಧಾನಗಳ ಬಗ್ಗೆ ಸಚಿವರು ಪ್ರಸ್ತಾಪಿಸಿದರು.
ರಾಜ್ಯ ಸರಕಾರ ನಡೆಸಿದ ಪರೀಕ್ಷೆಯ ವಿಧಾನವನ್ನು ತೈಲ ಕಂಪೆನಿಗಳು ಪ್ರಶ್ನಿಸುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಯಾವ ಪರೀಕ್ಷಾ ವಿಧಾನವನ್ನು ಅನುಸರಿಸಬೇಕು ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಿ, ವೈಜ್ಞಾನಿಕ ಆಧಾರದಲ್ಲಿ ಉತ್ತರ ನೀಡಬೇಕು. ಕೇವಲ ತಾಂತ್ರಿಕ ಪದಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವರದಿಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರಕಾರ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ರಾಜ್ಯ ಸರಕಾರ ಬಹಿರಂಗಪಡಿಸಿರುವ ಮಾಹಿತಿಗೆ ಸ್ಪಷ್ಟ ಉತ್ತರ ನೀಡಬೇಕು. ಜನರ ವಾಹನಗಳ ಸುರಕ್ಷತೆ ಹಾಗೂ ಗ್ರಾಹಕರ ಹಿತಾಸಕ್ತಿಯ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮ ವರದಿಯ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ ಎಂದು ಸಚಿವ ರಿಝ್ವಾನ್ ಅರ್ಷದ್ ಪುನರುಚ್ಚರಿಸಿದರು.