ಬೆಂಗಳೂರು : ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ರಾಜ್ಯ ಸರಕಾರ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರುತ್ತಿದೆ. ಕೂಡಲೇ ದರ ಏರಿಕೆಯನ್ನು ಹಿಂಪಡೆಯಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ರವಿವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರಾಜ್ಯಾಧ್ಯಕ್ಷೆ ಚಂದ್ರಕುಮಾರಿ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸರಕಾರ ಬೆಲೆ ಏರಿಕೆಯ ಬಂಪರ್ ಕೊಡುಗೆ ನೀಡಿದೆ. ಹಾಲಿನ ಬೆಲೆ ಲೀಟರ್‍ಗೆ 8 ರೂ. ಹೆಚ್ಚಳ ಎಂದು ಘೋಷಿಸಲಾಗಿದ್ದರೂ ಕೆಲವು ಬ್ರಾಂಡ್‍ಗಳ ಹಾಲಿನ ಬೆಲೆ ಲೀಟರ್‍ಗೆ 15 ರೂ.ವರೆಗೆ ಏರಿಕೆಯಾಗಿದೆ. ಬೆಣ್ಣೆ, ತುಪ್ಪ, ಪನ್ನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯೂ ಗಣನೀಯವಾಗಿ ಹೆಚ್ಚಳವಾಗಿದೆ ಎಂದಿದ್ದಾರೆ.

ರೈತರಿಗೆ ಪ್ರತಿ ಲೀ.ಹಾಲಿಗೆ 7 ರೂ.ಹೆಚ್ಚುವರಿ ಹಣ ನೀಡಿರುವುದು ಸ್ವಾಗತಾರ್ಹ. ಆದರೆ ರೈತರಿಗೆ ನೆರವು ನೀಡುವ ಜವಾಬ್ದಾರಿ ಸರಕಾರದ್ದಾಗಿದೆ. ಸರಕಾರದ ಖಜಾನೆಯಿಂದ ನೆರವು ನೀಡುವ ಬದಲು ಗ್ರಾಹಕರ ಮೇಲೆ ಹೊರೆ ಹಾಕುವುದು ಮತ್ತು ರೈತರನ್ನು ಗ್ರಾಹಕರ ವಿರುದ್ಧ ಎತ್ತಿಕಟ್ಟುವ ನೀತಿ ಸರಿಯಲ್ಲ. ಇನ್ನು ಬಸ್ ಪ್ರಯಾಣ ದರ ಏರಿಕೆಯೂ ಜನಸಾಮಾನ್ಯರಿಗೆ ದೊಡ್ಡ ಹೊಡೆತ ನೀಡಿದೆ. ಬೆಂಗಳೂರಿನಿಂದ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಕೆಂಪು ಬಸ್‍ನಲ್ಲಿ ಈ ಹಿಂದೆ 566ರೂ.ಇದ್ದ ಪ್ರಯಾಣ ದರವನ್ನು 679 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಚಂದ್ರಕುಮಾರಿ ವಿವರಿಸಿದ್ದಾರೆ.

ಒಂದೇ ಪ್ರಯಾಣಕ್ಕೆ 113 ರೂ. ಹೆಚ್ಚಳವಾಗಿದ್ದು, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿರುವ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಗ್ರಾಮೀಣ ಜನರಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ. ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿದೆ. ಮತ್ತೊಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರವೂ ಅಗತ್ಯ ವಸ್ತುಗಳ ಬೆಲೆ ಮತ್ತು ಸಾರಿಗೆ ದರ ಹೆಚ್ಚಿಸುವ ಮೂಲಕ ಜನರ ಬದುಕನ್ನು ದುಸ್ತರಗೊಳಿಸುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರಕಾರ ಕೂಡಲೇ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ನಿರ್ಧಾರವನ್ನು ಹಿಂಪಡೆಯಬೇಕು. ಕಾರ್ಮಿಕರಿಗೆ ಘೋಷಿಸಿರುವ ಕನಿಷ್ಠ ವೇತನ ಹೆಚ್ಚಳವನ್ನು ಜಾರಿಗೊಳಿಸಬೇಕು. ರೈತರಿಗೆ ನೀಡುವ ಆರ್ಥಿಕ ನೆರವಿನ ಹೊಣೆಯನ್ನು ಸರಕಾರವೇ ಹೊರಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನವಿರೋಧಿ ಬೆಲೆ ಏರಿಕೆ ನೀತಿಗಳನ್ನು ಕೈಬಿಡಬೇಕು ಎಂದು ಚಂದ್ರಕುಮಾರಿ ಒತ್ತಾಯಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor