ಇಂದುಶೇಖರ್(52)

ಬೆಂಗಳೂರು : ಒಂದೇ ಕುಟುಂಬದ ಏಳು ಮಂದಿಯ ಸರಣಿ ಹತ್ಯೆ ಪ್ರಕರಣದಲ್ಲಿ ರಾಜಾಜಿನಗರ ಠಾಣೆ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಈತನಕ ಒಟ್ಟು ಐದು ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಎರಡು ಮೃತದೇಹಗಳಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾದ ಮೃತ ದೇಹಗಳನ್ನು ಶಿವಕುಮಾರ್ ಮತ್ತು ದಿವ್ಯ ದಂಪತಿಯ ಮೃತದೇಹಗಳು ಎಂದು ಪೊಲೀಸರು ಶಂಕಿಸಿದ್ದು, ಕೊಲೆ ಆರೋಪಿ ಇಂದುಶೇಖರನನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.

ಶನಿವಾರದಂದು ತಮಿಳುನಾಡಿನ ಸೇಲಂನ ಕಾಡಿನಲ್ಲಿ ಆರೋಪಿಯ ಪತ್ನಿ ಸುನೀತ ಮತ್ತು ಅತ್ತೆ ರೂಪವತಿ ಮೃತದೇಹಗಳು ದೊರೆತಿದ್ದು, ಅವುಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ದೊರೆತಿದ್ದು, ಈಗಾಗಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಶಿರಾಡಿ ಘಾಟ್‍ಗೆ ತೆರಳಿರುವ ವಿಶೇಷ ತಂಡವೊಂದು ಅಲ್ಲಿ ಶೋಧ ನಡೆಸುತ್ತಿದೆ.

ಆರೋಪಿ ಇಂದುಶೇಖರ ಪತ್ನಿ ಸೇರಿದಂತೆ ಏಳು ಮಂದಿ ಸಂಬಂಧಿಕರನ್ನು ಭೀಕರವಾಗಿ ಕೊಲೆ ಮಾಡಿ ಮೃತದೇಹಗಳನ್ನು ಗೋಣಿಚೀಲದಲ್ಲಿ ತುಂಬಿ ಕಾರಿನಲ್ಲಿ ತೆಗೆದುಕೊಂಡು ಹೋಗಿ ನಂದಿಬೆಟ್ಟದ ತಪ್ಪಲು, ಸೇಡಂನ ಕಾಡು, ಚಾಮುಂಡಿ ಬೆಟ್ಟದ ತಪ್ಪಲು, ಶಿರಾಡಿಘಾಟ್‍ನಲ್ಲಿ ಎಸೆದಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ವಶಕ್ಕೆ ಪಡೆದಿರುವ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor