ರಿಝ್ವಾನ್ ಅರ್ಶದ್

ಬೆಂಗಳೂರು : ಮಿತಿಮೀರಿದ ಎಥೆನಾಲ್ ಮಿಶ್ರಣದಿಂದ ವಾಹನಗಳ ಇಂಜಿನ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ವಾಹನ ತಯಾರಿಕಾ ಕಂಪೆನಿಗಳು ಆತಂಕವ್ಯಕ್ತಪಡಿಸಿವೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ  ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ವಿವಾದ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಥೆನಾಲ್ ಮಿಶ್ರಿತ ಇ20 ಇಂಧನದ ಗುಣಮಟ್ಟ ಹಾಗೂ ವಾಹನಗಳ ಇಂಜಿನ್‌ಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಾಹನ ತಯಾರಿಕಾ ವಲಯದ ಆತಂಕಗಳ ಬಗ್ಗೆ ಪ್ರಸ್ತಾಪಿಸಿದರು.

ಸೊಸೈಟಿ ಆಫ್ ಇಂಡಿಯನ್ ಆಟೊ ಮೊಬೈಲ್ ಮ್ಯಾನುಫ್ಯಾಕ್ಚರರ್ಸ್(ಎಸ್‌ಐಎಎಂ) ಸಂಸ್ಥೆಯು 2026ರ ಜು.28ರಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ಇ20 ಇಂಧನದಲ್ಲಿನ ಕ್ಲೋರೈಡ್ ಮತ್ತು ಸಲ್ಫರ್ ಅಂಶಗಳ ಪ್ರಮಾಣದ ಕುರಿತು ಕಳವಳ ವ್ಯಕ್ತಪಡಿಸಿತ್ತು. ಇದರಿಂದ ವಾಹನಗಳ ಇಂಜಿನ್‌ಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂಬ ವಿಚಾರವನ್ನು ಪ್ರಸ್ತಾಪಿಸಿತ್ತು ಎಂದು ಸಚಿವ ರಿಝ್ವಾನ್ ಹೇಳಿದರು.

ಇದೇ ರೀತಿ ಕೆಲವು ವಾಹನ ತಯಾರಿಕಾ ಕಂಪೆನಿಗಳು ಇ20 ಇಂಧನ ಬಳಕೆಯಿಂದ ಉಂಟಾಗುವ ಸಮಸ್ಯೆಗಳ ಕುರಿತು ವಾರಂಟಿ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದವು. ಬಿಎಂಡಬ್ಲ್ಯೂ ಸಂಸ್ಥೆಯ ಪ್ರತಿನಿಧಿಯ ಹೇಳಿಕೆಯನ್ನೂ ಉಲ್ಲೇಖಿಸಿದ ಸಚಿವರು, ಭವಿಷ್ಯದಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣ ಮತ್ತಷ್ಟು ಹೆಚ್ಚಾದರೆ ಸಾಮಾನ್ಯ ಜನರು ಬಳಸುವ ದ್ವಿಚಕ್ರ ಮತ್ತು ಇತರ ವಾಹನಗಳ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ತೈಲ ಕಂಪೆನಿಗಳಿಗೆ ಸಚಿವರ ಪ್ರಶ್ನೆ :

‘ಎಥೆನಾಲ್ ಮಿಶ್ರಣವು ನಿಯಂತ್ರಿತ ಮತ್ತು ಸ್ವಯಂಚಾಲಿತ ಪ್ರಕ್ರಿಯೆಯಾಗಿದೆ ಎಂದು ತೈಲ ಕಂಪೆನಿಗಳೇ ತಮ್ಮ ಉತ್ತರದಲ್ಲಿ ಹೇಳಿವೆ. ಹಾಗಾದರೆ, ಪೆಟ್ರೋಲ್ ಬಂಕ್‌ಗಳ ಮಾಲಕರು ಅಥವಾ ಡೀಲರ್‌ಗಳು ಈ ಪ್ರಮಾಣವನ್ನು ನಿರ್ಧರಿಸಲು ಸಾಧ್ಯವೇ?’ ಎಂದು ಸಚಿವ ರಿಝ್ವಾನ್ ಅಶರ್ದ್ ಪ್ರಶ್ನಿಸಿದರು.

ರಾಜ್ಯದಲ್ಲಿರುವ ಆರು ಪ್ರಮುಖ ತೈಲ ಟರ್ಮಿನಲ್‌ಗಳಲ್ಲಿ ಪೆಟ್ರೋಲ್‌ಗೆ ಎಥೆನಾಲ್ ಮಿಶ್ರಣ ಮಾಡಲಾಗುತ್ತದೆ. ಈ ಪ್ರಕ್ರಿಯೆ ತೈಲ ಕಂಪೆನಿಗಳ ನಿಯಂತ್ರಣದಲ್ಲಿರುವುದರಿಂದ, ಮಿತಿಮೀರಿದ ಮಿಶ್ರಣ ಕಂಡುಬಂದರೆ ಅದರ ಜವಾಬ್ದಾರಿಯನ್ನು ಪೆಟ್ರೋಲ್ ಬಂಕ್ ಡೀಲರ್‌ಗಳ ಮೇಲೆ ಹೊರಿಸುವುದು ಸರಿಯಲ್ಲ. ಮಿಶ್ರಣದ ಪ್ರಮಾಣವನ್ನು ನಿರ್ಧರಿಸುವವರು ತೈಲ ಕಂಪೆನಿಗಳೇ ಆಗಿರುವುದರಿಂದ ಅವುಗಳೇ ಸ್ಪಷ್ಟನೆ ನೀಡಬೇಕು ಎಂದು ರಿಝ್ವಾನ್ ಅಶರ್ದ್ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor