ಬೆಂಗಳೂರು : ಮದುವೆಯಾಗಿ, ಪತಿಯ ಬಳಿ ಹಣಕ್ಕೆ ಬೇಡಿಕೆ ಇಟ್ಟು ಬಳಿಕ ಕ್ರಿಮಿನಲ್ ಪ್ರಕರಣ ದಾಖಲಿಸಿ ವಿಚ್ಛೇದನ ಪಡೆಯುವ ಮೂಲಕ ಮರುಮದುವೆಯಾಗುವ ಆರೋಪ ಎದುರಿಸುತ್ತಿರುವ ಮಹಿಳೆಯೊಬ್ಬರ ನಡೆಯನ್ನು ಟೀಕಿಸಿರುವ ಹೈಕೋರ್ಟ್, ಮಹಿಳೆಯ ಏಳನೇ ಪತಿ ಎನ್ನಲಾದ ಹೊಸಪೇಟೆಯ ರಾಜಕಾರಣಿ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿದೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಪಟ್ಟಿ ರದ್ದು ಕೋರಿ ಹೊಸಪೇಟೆಯ ರಾಜಾಹುಸೇನ್ (47) ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ಕಾನೂನು ಪ್ರಕ್ರಿಯೆ ದುರ್ಬಳಕೆ: ಮಹಿಳೆಯು ಕಾನೂನು ಪ್ರಕ್ರಿಯೆಯನ್ನು ದುರುದ್ದೇಶಪೂರಿತವಾಗಿ ಬಳಸಿಕೊಂಡಿರುವುದನ್ನು ಗಮನಿಸಿರುವ ನ್ಯಾಯಪೀಠ, ದುರ್ಬಲರಿಗೆ ರಕ್ಷಣೆ ನೀಡಲು ರೂಪಿಸಲಾದ ಐಪಿಸಿ ಸೆಕ್ಷನ್ 498ಎ (ವಿವಾಹಿತ ಮಹಿಳೆಯ ವಿರುದ್ಧ ಕ್ರೌರ್ಯ) ಅನ್ನು ಪ್ರತಿವಾದಿ ಮಹಿಳೆ ಅನ್ಯ ಉದ್ದೇಶಕ್ಕಾಗಿ ಬಳಸಿಕೊಂಡಿದ್ದಾರೆ. ಅವರ ಪುನರಾವರ್ತಿತ ಮದುವೆಗಳು ದುರದೃಷ್ಟಕರ ಘಟನೆಗಳ ಆಕಸ್ಮಿಕ ಸಂಯೋಜನೆಯಲ್ಲ. ಪ್ರತಿವಾದಿ ಪತ್ನಿ ಮದುವೆಯಾದ ಬಳಿಕ ತನ್ನ ಪತಿಯಿಂದ ಹಣ ಪಡೆಯಲು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುತ್ತಾ ಬಂದಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಹೇಳಿದೆ.

ಅರ್ಜಿದಾರ ಪತಿ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ, ಅವರು ದೂರುದಾರ ಮಹಿಳೆಯ ಏಳನೇ ಪತಿ ಎಂಬುದು ಕಂಡುಬಂದಿದೆ. ಅಲ್ಲದೆ, 2023ರ ನಂತರ ಅವರು ಎಂಟನೇ ಮತ್ತು ಒಂಬತ್ತನೇ ಮದುವೆಗಳನ್ನು ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಲಭ್ಯ ಇವೆ. ಅರ್ಜಿದಾರರ ವಿರುದ್ಧ ಪತ್ನಿ ಮಾಡಿರುವ ಆರೋಪಗಳು ಕಾನೂನಿನ ಅಡಿಯಲ್ಲಿ ಅಪರಾಧವನ್ನು ಸ್ಥಾಪಿಸಲು ಅಗತ್ಯವಾದ ನಿರ್ದಿಷ್ಟ ವಾಸ್ತವಿಕ ಆಧಾರವನ್ನು ಹೊಂದಿಲ್ಲ ಹೈಕೋರ್ಟ್ ಹೇಳಿದೆ.

ಕೇವಲ ಆರೋಪಗಳನ್ನು ಹೊರಿಸಿದ ಮಾತ್ರಕ್ಕೆ ಪ್ರಕರಣವನ್ನು ಮುಂದುವರಿಸಲಾಗುವುದಿಲ್ಲ. ಆರೋಪಗಳು ವಿಚಾರಣೆಯನ್ನು ಮುಂದುವರಿಸಲು ಅಗತ್ಯವಾದ ವಾಸ್ತವಿಕ ಅಡಿಪಾಯವನ್ನು ಹೊಂದಿರಬೇಕು. ಇಂತಹ ಟೊಳ್ಳಾದ ದೂರಿನ ಆಧಾರದ ಮೇಲೆ ಪ್ರಾಸಿಕ್ಯೂಷನ್ ಮುಂದುವರಿಯುವುದನ್ನು ಸಮರ್ಥಿಸಲಾಗುವುದಿಲ್ಲ. ನ್ಯಾಯ ಪಡೆಯಲು ಕೈಗೊಳ್ಳುವ ಪ್ರತಿಯೊಂದು ಹಂತವೂ ನ್ಯಾಯಸಮ್ಮತವಾಗಿರಬೇಕು ಎಂದಿರುವ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor