ಸರಕಾರದ ಹಗಲು ದರೋಡೆ ರಾಜಕಾರಣ ಇನ್ನು ಎಷ್ಟು ದಿನ?: ಆರ್.ಅಶೋಕ್
ಬೆಂಗಳೂರು : ‘ಸಿಎಂ ಡಿ.ಕೆ.ಶಿವಕುಮಾರ್‍ರೇ, ಒಂದು ಕೈಯಲ್ಲಿ ಉಚಿತ ಗ್ಯಾರೆಂಟಿ ಎಂದು ತೋರಿಸಿ, ಮತ್ತೊಂದು ಕೈಯಲ್ಲಿ ಹಾಲು, ಬಸ್ ದರಗಳ ಮೂಲಕ ಬಡವರ ಜೇಬಿಗೆ ಕತ್ತಿ ಹಾಕುತ್ತಿರುವ ನಿಮ್ಮ ಸರಕಾರದ ಜನವಿರೋಧಿ ಹಗಲು ದರೋಡೆ ರಾಜಕಾರಣ ಇನ್ನು ಎಷ್ಟು ದಿನ?. ಜನರ ಬದುಕನ್ನು ಹೈರಾಣಾಗಿಸಿರುವ ನಿಮ್ಮ ಈ ಅಕ್ಷಮ್ಯ ವೈಫಲ್ಯಕ್ಕೆ ಜನತೆ ಶೀಘ್ರದಲ್ಲೇ ತಕ್ಕಪಾಠ ಕಲಿಸುವುದು ಖಂಡಿತ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಅಗತ್ಯ ವಸ್ತುಗಳ ದರ ಏರಿಕೆ ಮತ್ತು ಸರಕಾರದ ದೋಚುವ ನೀತಿಯನ್ನು ಪ್ರಶ್ನಿಸಿ ಹೈಕೋರ್ಟ್ ಕೆಂಡಾಮಂಡಲವಾಗಿದೆ. ‘ಸರಕಾರದ ಎಲ್ಲ ಯೋಜನೆಗಳು ಉಚಿತ... ಉಚಿತ... ಅಂತಾರೆ, ಒಂದ್ಕಡೆ ಉಚಿತವಾಗಿ ನೀಡ್ತು, ಮತ್ತೊಂದ್ಕಡೆ ಅಗತ್ಯ ವಸ್ತು ಬೆಲೆಯನ್ನು ಖಚಿತವಾಗಿ ಹೆಚ್ಚಿಸುವುದು’ ಎಂದು ನ್ಯಾಯಪೀಠ ಸರಕಾರದ ಬೂಟಾಟಿಕೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ’ ಎಂದು ಉಲ್ಲೇಖಿಸಿದ್ದಾರೆ.
‘ಹಾಲು, ತುಪ್ಪ, ಬಸ್ ದರಗಳನ್ನು ಮನಸೋಇಚ್ಛೆ ಏರಿಕೆ ಮಾಡಿ ಸಾಮಾನ್ಯ ಜನರ ಬದುಕನ್ನು ಮೂರಾಬಟ್ಟೆ ಮಾಡಲಾಗಿದೆ. ಒಂದು ತಿಂಗಳ ಹಿಂದೆ 650ರೂ.ಇದ್ದ ಕೆ.ಜಿ.ತುಪ್ಪದ ಪ್ಯಾಕೆಟ್ ಈಗ 850 ರೂ.ಗೆ ಏರಿಕೆಯಾಗಿದೆ. ಇಷ್ಟು ದರ ಹೆಚ್ಚಿದರೆ ಹೇಗೆ ತುಪ್ಪದ ದೀಪ ಹಚ್ಚಲು ಸಾಧ್ಯ? ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಸರಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಖಚಿತ. ‘ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಾ ಹೋದರೆ ಮನುಷ್ಯ ಎಲ್ಲಿಗೆ ಹೋಗಬೇಕು? ಸಾಮಾನ್ಯಜನ ಜೀವನ ಸಾಗಿಸುವುದಾದರೂ ಹೇಗೆ?’ ಎಂದು ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ’ ಎಂದು ಆರ್.ಅಶೋಕ್ ಇದೇ ವೇಳೆ ಗಮನ ಸೆಳೆದಿದ್ದಾರೆ.