ರಾಜ್ಯದಲ್ಲಿ 11 ಮಂದಿ ನಕಲಿ ಆಯುರ್ವೇದ ವೈದ್ಯರ ಪತ್ತೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು ವೈದ್ಯರ ನೋಂದಣಿ ಪ್ರಮಾಣ ಪತ್ರಗಳು ಇಲ್ಲದ 11 ಮಂದಿ ಆಯುರ್ವೇದ ಮತ್ತು ಯುನಾನಿ ವೈದ್ಯರನ್ನು ಪತ್ತೆ ಮಾಡಿದ್ದು, ಇವರನ್ನು ನಕಲಿ ವೈದ್ಯರೆಂದು ಗುರುತಿಸಿದೆ.
ಧಾರವಾಡ ಜಿಲ್ಲೆಯ ನಾಗಯ್ಯ ಮಠ, ರಾಜಶೇಖರ ತೊರಗಲ್ಲು, ಅಬ್ದುಲ್ ಅಜೀಮ್ ಮುಲ್ಲಾ, ಬಳ್ಳಾರಿ ಜಿಲ್ಲೆಯ ಶೀಲವೇರಿ ದಿವಾಕರ್, ಲಕ್ಷ್ಮೀ ನಾರಾಯಣರೆಡ್ಡಿ, ತುಮಕೂರು ಜಿಲ್ಲೆಯ ರಾಮಾಂಜನೇಯ ಲಿಖಿತ್ ರಾಮ್ ಕ್ಲಿನಿಕ್, ಚೌಡಪ್ಪ, ಯೋಗಾನಂದ, ದಿನೇಶ್ ಕೆ.ಎಸ್., ಚಿತ್ರದುರ್ಗ ಜಿಲ್ಲೆಯ ಎಂ.ವಿ.ನಾಗರಾಜು, ಗದಗ ಜಿಲ್ಲೆಯ ಸೋಮೇಶ್ವರ ಕದಡಿ ಅವರನ್ನು ನಕಲಿ ವೈದ್ಯರೆಂದು ಗುರುತಿಸಲಾಗಿದೆ.
11 ಜನರಿಗೆ ವೈದ್ಯರ ನೋಂದಣಿ ಪ್ರಮಾಣ ಪತ್ರಗಳ ನೈಜತೆ ಪರಿಶೀಲನೆಗಾಗಿ ಹಾಜರಾಗಲು ಈಗಾಗಲೇ ಮೂರು ಬಾರಿ ಸೂಚನಾ ಪತ್ರಗಳನ್ನು ನೀಡಲಾಗಿತ್ತು. ಆದರೂ ಮಂಡಳಿಗೆ ಯಾವುದೇ ಮೂಲ ದಾಖಲಾತಿಗಳನ್ನು ಹಾಜರುಪಡಿಸಿಲ್ಲ. ಅಲ್ಲದೇ ಈ ವೈದ್ಯರು ವೈದ್ಯ ವೃತ್ತಿ ಕೈಗೊಳ್ಳಲು ಮಂಡಳಿಯಲ್ಲಿ ನೋಂದಣಿಗೊಂಡಿರುವುದಿಲ್ಲ.
ಹೀಗಾಗಿ 11 ಜನ ವೈದ್ಯರುಗಳು ನಕಲಿ ವೈದ್ಯರೆಂದು ಆಯಾ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ಜಿಲ್ಲಾ ಆಯುಷ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಜಾಗೃತೆ ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯು ಪ್ರಕಟನೆಯಲ್ಲಿ ತಿಳೀಸಿದೆ.