×
Ad

ಕೃಷಿ ಸಾಲಮನ್ನಾ ಸೇರಿ 19 ನಿರ್ಣಯಗಳನ್ನು ಮಂಡಿಸಿದ ರೈತ ಸಮಾವೇಶ

Update: 2024-02-10 20:05 IST

ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಬೇಕೆಂಬ ಒತ್ತಾಯದ ಜತೆಗೆ ಒಟ್ಟು 19 ನಿರ್ಣಯಗಳನ್ನು ರಾಜ್ಯ ರೈತ ಸಂಘದಿಂದ ಸಮಾವೇಶದಲ್ಲಿ ಕೈಗೊಳ್ಳಲಾಯಿತು. 

ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆದ ರೈತನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೆನಪಿನ ದಿನಾಚರಣೆ ಮತ್ತು ಬೃಹತ್ ರೈತ ಸಮಾವೇಶದಲ್ಲಿ ರೈತರು ಮುಖ್ಯಮಂತ್ರಿ ಎದುರು ತಮ್ಮ ಬೇಡಿಕೆಗಳನ್ನು ಇಟ್ಟು ಮನವಿ ಮಾಡಿದರು.

ಇದೇ ವೇಳೆ ಮಾತನಾಡಿದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯವು ಹಿಂದೆಂದೂ ಕಂಡರಿಯದಂತಹ ಬರಗಾಲಕ್ಕೆ ಒಳಗಾಗಿದೆ. ಕೇಂದ್ರ ತನ್ನ ಪಾಲಿನ ಪರಿಹಾರದ ಅನುದಾನವನ್ನು ಇದುವರೆಗೆ ಬಿಡುಗಡೆ ಮಾಡದಿರುವುದು ಖಂಡನೀಯ. ಸರಕಾರಗಳು ರೈತರನ್ನು ಹೀನಾಯವಾಗಿ ಕಡೆಗಣಿಸುತ್ತಿವೆ. ಇದು ಹೀಗೆಯೇ ಮುಂದುವರೆದರೆ ಸರಕಾರಗಳು ರೈತರ ಬೃಹತ್ ಚಳುವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದ ವಿವಿಧೆಡೆ ರೈತರಿಗೆ ಆಗುತ್ತಿರುವ ಅನ್ಯಾಯಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು. ರೈತರನ್ನು ನ್ಯಾಯಯುತ ಪರಿಹಾರವನ್ನು, ಸೌಲಭ್ಯವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.

•ಪ್ರಮುಖ ನಿರ್ಣಯಗಳು:

► ರೈತರು ಸಾಲದ ಸುಳಿಗೆ ಸಿಲುಕದಂತೆ ಕೃಷಿ ನೀತಿಯನ್ನು ರೂಪಿಸಬೇಕು. ಹೆಕ್ಟೇರ್ ಗೆ 25ಸಾವಿರ ರೂ.ಗಳ ಬರನಷ್ಟ ಪರಿಹಾರವನ್ನು ರಾಜ್ಯ ಸರಕಾರ ಘೋಷಿಸಬೇಕು.

►‌ ರಾಜ್ಯ ಸರಕಾರವು ಯಾವುದೇ ಕಾರಣಕ್ಕೂ ಬ್ಯಾಂಕುಗಳು ಕೃಷಿ ಸಾಲಕ್ಕಾಗಿ ರೈತರ ಸ್ಥಿರ ಆಸ್ತಿಗಳನ್ನು ಹರಾಜು ಮಾಡುವುದನ್ನು ತಡೆಯಲು ಸೂಕ್ತ ಕಾನೂನು ಕ್ರಮ ರೂಪಿಸಬೇಕು.

► ಕೃಷಿ ಬೆಲೆ ಆಯೋಗದ ಸಬಲೀಕರಣಕ್ಕೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ವಾಗ್ದಾನದಂತೆ ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು. ಆಯೋಗ ನೀಡುವ ವರದಿಗಳನ್ನು ಜಾರಿಗೆ ತರುವಂತೆ ಕ್ರಮ ಕೈಗೊಳ್ಳಬೇಕು. ಈ ಆಯೋಗಕ್ಕೆ ಶಾಸಕರು, ಅಥವಾ ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ನೇಮಿಸದೆ ಕೃಷಿ ಮತ್ತು ಮಾರುಕಟ್ಟೆ ತಜ್ಞರು, ಕೃಷಿ ತಜ್ಞ ರೈತರನ್ನು ನೇಮಿಸಬೇಕು.

► ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ವಾಪಸ್ ಪಡೆದುಕೊಳ್ಳಬೇಕು.

► ಫಸಲ್‍ ಭಿಮಾ ಯೋಜನೆಯಲ್ಲಿ ಪ್ರೀಮಿಯಂ ತುಂಬಿದ ರೈತರಿಗೆ ಬೆಳೆ ನಷ್ಟವಾದರೂ ಸೂಕ್ತ ಪರಿಹಾರ ಸಿಕ್ಕಿರುವುದಿಲ್ಲ. ಹಲವಾರು ಜಿಲ್ಲೆಗಳಲ್ಲಿ ಫಸಲ್ ಭಿಮಾ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು.

► ತುಂಗಭದ್ರ ಎಡದಂಡೆ ನಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ರೈತರ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಬೇಕು. ಕಾಂಗ್ರೆಸ್ ನೇತೃತ್ವದಲ್ಲಿನ ರಾಜ್ಯ ಸರಕಾರವು ಕೇಂದ್ರದ ವಿದ್ಯುತ್ ತಿದ್ದುಪಡಿ ಕಾಯ್ದೆ-2020ನ್ನು ಜಾರಿಗೆ ತರದೇ ಬದ್ಧತೆ ತೋರಬೇಕು.

► ಹಿಂದಿನ ಸರಕಾರ ಘೋಷಣೆ ಮಾಡಿರುವ ಟನ್ ಕಬ್ಬಿಗೆ 150 ರೂ.ನಂತೆ ರೈತರಿಗೆ ಪಾವತಿಸಲು ಇರುವ ಎಲ್ಲ ತಾಂತ್ರಿಕ ತೊಂದರೆಯನ್ನು ನಿವಾರಿಸಿ ರೈತರ ಖಾತೆಗೆ ತುಂಬಲು ಶೀಘ್ರ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಎಸ್‍ಎಪಿಯನ್ನು ತಕ್ಷಣ ಘೋಷಣೆ ಮಾಡಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News