×
Ad

ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಗಲಾಟೆ: ದೂರು ದಾಖಲು

Update: 2024-03-31 22:27 IST

ಬೆಂಗಳೂರು: ಮನೆಯ ಮುಂದೆ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಇಬ್ಬರು ದಂಪತಿಗಳ ನಡುವೆ ಗಲಾಟೆ ಆರಂಭವಾಗಿ ಪೊಲೀಸ್ ಠಾಣಾ ಮೆಟ್ಟಿಲೇರಿದ ಘಟನೆ ಇಲ್ಲಿನ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯ ಕೋಡಿಚಿಕ್ಕನಹಳ್ಳಿಯಲ್ಲಿ ವರದಿಯಾಗಿದೆ.

ನೆರೆಮನೆಯಲ್ಲಿರುವ ಪ್ರಣಬ್ ಜ್ಯೋತಿ ಸಿಂಗ್-ನೇಹಾ ದಂಪತಿಯ ಕಾಟಕ್ಕೆ ಬೇಸತ್ತ ಮಂಜುನಾಥ್ ಹಾಗೂ ಸರಿತಾ ದಂಪತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೋಡಿಚಿಕ್ಕನಹಳ್ಳಿಯ ಚೈತನ್ಯ ಪ್ಯಾರಡೈಸ್ ಅಪಾರ್ಟ್‍ಮೆಂಟಿನ 3ನೇ ಮಹಡಿಯಲ್ಲಿ ಮಂಜುನಾಥ್ ಮತ್ತು ಸರಿತಾ ದಂಪತಿ ವಾಸಿಸುತ್ತಿದ್ದಾರೆ. ಇವರ ಪಕ್ಕದ ಮನೆಯಲ್ಲಿ ನೇಹಾ ಹಾಗೂ ಪ್ರಣಬ್ ಜ್ಯೋತಿ ಸಿಂಗ್ ವಾಸವಿದ್ದಾರೆ. ಎರಡು ವರ್ಷಗಳಿಂದ ಮನೆ ಮುಂದೆ ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಎರಡೂ ಮನೆಯವರ ನಡುವೆ ಗಲಾಟೆಯಾಗಿತ್ತು. ಮಂಜುನಾಥ್ ದಂಪತಿಯ ಮನೆ ಬಾಗಿಲು ತೆರೆದರೆ ಕಾಣುವ ಹಾಗೆ ನೇಹಾ ತಮ್ಮ ಚಪ್ಪಲಿ ಸ್ಟ್ಯಾಂಡ್ ಇರಿಸಿರುತ್ತಿದ್ದರಂತೆ. ಇದರಿಂದ ಬೇಸತ್ತ ಮಂಜುನಾಥ್, ಮನೆ ಮುಂದೆ ಚಪ್ಪಲಿ ಸ್ಟ್ಯಾಂಡ್ ಇಡದಂತೆ ನೇಹಾಗೆ ಹೇಳಿದ್ದರು. ಈ ವೇಳೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿದೆ.

ಅಂದಿನಿಂದಲೂ ಗಲಾಟೆ ಮುಂದುವರೆದು ಮಂಜುನಾಥ್ ಮನೆಯವರಿಗೆ ನೇಹಾ ದಿನನಿತ್ಯ ಕಿರುಕುಳ ನೀಡುತ್ತಿದ್ದರು. ಮನೆಯಿಂದ ಹೋಗುವಾಗ ಬರುವಾಗ ಉದ್ದೇಶಪೂರ್ವಕವಾಗಿ ಮಂಜುನಾಥ್ ಮನೆಯ ಚಪ್ಪಲಿ ಸ್ಟ್ಯಾಂಡ್ ಬೀಳಿಸುವುದು, ಮನೆ ಮುಂದೆ ಬಿಡಿಸಿದ್ದ ರಂಗೋಲಿಯನ್ನು ಕಾಲಿಂದ ಅಳಿಸುವ ಕೆಲಸ ಮಾಡುತ್ತಿದ್ದರು. ನಿತ್ಯ ಕಿರುಕುಳ ಸಹಿಸಲಾರದ ಮಂಜುನಾಥ್ ಹಾಗೂ ಸರಿತಾ ದಂಪತಿ, ನೇಹಾಳ ಕೃತ್ಯಗಳನ್ನೊಳಗೊಂಡ ಸಿಸಿಟಿವಿ ದೃಶ್ಯಗಳ ಸಮೇತ ಬೊಮ್ಮನಹಳ್ಳಿ ಠಾಣೆಗೆ ದೂರು ನೀಡಿದ್ದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News