ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ
ಮಹೇಶ್ವರ್ ರಾವ್
ಬೆಂಗಳೂರು : ‘ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಕ್ಷೇತ್ರದಲ್ಲಿ ಒಟ್ಟು 18,496 ಮತದಾರರಿದ್ದಾರೆ’ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಜಿಬಿಎ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರದಲ್ಲಿ 2,709, ಉತ್ತರ 3,512, ದಕ್ಷಿಣ 3,464 ಮತ್ತು ಬೆಂಗಳೂರು ನಗರ 8,811 ಮತದಾರರಿದ್ದಾರೆ ಎಂದರು.
ಒಟ್ಟು 18,496 ಮತದಾರರ ಪೈಕಿ ಗಂಡ 5,267 ಪುರುಷ ಮತ್ತು 13,229 ಮಹಿಳಾ ಮತದಾರರಿದ್ದಾರೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 40 ಮತಗಟ್ಟೆಗಳಿದ್ದು, ಬೆಂಗಳೂರು ಕೇಂದ್ರದಲ್ಲಿ 7, ಉತ್ತರ 7, ದಕ್ಷಿಣ 7 ಮತ್ತು ಬೆಂಗಳೂರು ನಗರ 19 ಮತಗಟ್ಟೆಗಳಿವೆ ಎಂದು ಅವರು ಮಾಹಿತಿ ನೀಡಿದರು.
ಚುನಾವಣೆ ವಿಭಾಗದ ವಿಶೇಷ ಆಯುಕ್ತ ಆರ್. ರಾಮಚಂದ್ರನ್ ಮಾತನಾಡಿ, ಅಂತಿಮ ಪರಿಷ್ಕರಣೆಯಲ್ಲಿ ತಪ್ಪಿಹೋದ ಅರ್ಹ ಶಿಕ್ಷಕರು ಅಭ್ಯರ್ಥಿಗಳ ನಾಮನಿರ್ದೇಶನದ ಕೊನೆಯ ದಿನಾಂಕದವರೆಗೆ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಮತದಾರರ ನೋಂದಣಿ ಹಾಗೂ ನವೀಕರಣ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಈ ವೇಳೆ ಬೆಂಗಳೂರು ಕೇಂದ್ರ/ದಕ್ಷಿಣ/ಉತ್ತರ/ನಗರ ವಿಭಾಗಗಳ ಅಪರ ಜಿಲ್ಲಾ ಚುನಾವಣಾಧಿಕಾರಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.